ಮಡಿಕೇರಿ, ಡಿ. 20: ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಜನಾಂಗದವರ ಹಲವು ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಬಗೆಹರಿಸಲಾಗುವುದು. ಕೆಲವು ಕ್ಲಿಷ್ಟಕರ ಸಮಸ್ಯೆಗಳನ್ನು ಮಾತ್ರ ಸರ್ಕಾರದ ಹಂತದಲ್ಲಿ ಪರಿಹರಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಜನಾಂಗದವರ ಕುಂದುಕೊರತೆಗಳ ಚರ್ಚಿಸುವ ಸಂಬಂಧ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಡಳಿತವು ಪರಿಶಿಷ್ಟ ಪಂಗಡ ಹಾಗೂ ಆದಿವಾಸಿ ಜನರ ಹಿತರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಹಲವು ಸವಲತ್ತುಗಳನ್ನು ಕಲ್ಪಿಸಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಮುತ್ತಪ್ಪ ಅವರು ಹಾಡಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಸ್ಥಿತಿಯಲ್ಲಿ ನಿರ್ವಹಣೆ ಮಾಡಲು ಮನವಿ ಮಾಡಿದರು.
ಬುಡಕಟ್ಟು ಸಮಾಜದ ಮುಖಂಡ ಹಾಗೂ ತಾ.ಪಂ. ಸದಸ್ಯ ಪ್ರಕಾಶ್ ಮಾತನಾಡಿ ಲೈನ್‍ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಜನರ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ. ಆದಿವಾಸಿಗಳಿಗೆ ಸೂಕ್ತ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ತಿತಿಮತಿ ಗ್ರಾ.ಪಂ. ಸದಸ್ಯ ಸುಗ್ಗು ಅವರು ಹಕ್ಕುಪತ್ರ, ಆರ್‍ಟಿಸಿ, ಬಿಪಿಎಲ್ ಪಡಿತರ ಚೀಟಿ ಇವುಗಳಲ್ಲಿ ಉಂಟಾಗಿರುವ ನ್ಯೂನತೆ ಸರಿಪಡಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.
ಬುಡಕಟ್ಟು ಕೃಷಿಕ ಸಮಾಜದ ಕಾರ್ಯದರ್ಶಿ ವಾಸು ಅವರು ಅರಣ್ಯ ಹಕ್ಕು ಕಾಯ್ದೆಯಡಿ ಕೆಲವು ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ಹಲವು ಅರ್ಹ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ನೀಡಬೇಕಿದೆ. ಹಾಡಿಗಳಲ್ಲಿ ವಿದ್ಯುತ್, ರಸ್ತೆ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯ ಕಲ್ಪಿಸಬೇಕು. ಜೊತೆಗೆ ಹಾಡಿಗಳಲ್ಲಿ ಗ್ರಾಮಸಭೆ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಕೋರಿದರು.
ಆದಿವಾಸಿ ಮಹಿಳಾ ಮುಖಂಡರಾದ ಮುತ್ತಮ್ಮ ಅವರು ಬುಡಕಟ್ಟು ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಅನ್ವಯ ಕೃಷಿ ಜಮೀನು ನೀಡಬೇಕು. ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಬೇಕು. ಲೈನ್‍ಮನೆಗಳಲ್ಲಿ ವಾಸವಿರುವ ಆದಿವಾಸಿ ಕುಟುಂಬಗಳಿಗೆ ಉತ್ತಮ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು. ಬಾಳೆಗುಂಡಿ ಹಾಡಿಯಲ್ಲಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.
ಆದಿವಾಸಿ ಜನಾಂಗದ ಪ್ರಮುಖ ಆರ್.ಕೆ.ಚಂದ್ರ ಮಾತನಾಡಿ ಬುಡಕಟ್ಟು ಜನರಿಗೆ ಇರುವ ಯೋಜನೆಗಳ ಕಾರ್ಯರೂಪಕ್ಕೆ ಹೆಚ್ಚಿನ ಕ್ರಮವಹಿಸಬೇಕು. ಹಕ್ಕುಪತ್ರ ಹೊಂದಿರುವ ಅರಣ್ಯ ವಾಸಿಗಳಿಗೆ ಕೂಡಲೇ ಆರ್‍ಟಿಸಿ ದೊರಕಿಸಿಕೊಟ್ಟು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.
ಮಿಟ್ಟು ರಂಜಿತ್ ಮಾತನಾಡಿ ಅರಣ್ಯ ಹಕ್ಕು ಕಾಯ್ದೆ ಬಂದರೂ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲ. ಪೈಸಾರಿ ಜಾಗದಲ್ಲಿ ನೆಲೆಸಿರುವ ಗಿರಿಜನರಿಗೆ ಸೂರು ಕಲ್ಪಿಸಬೇಕು. ಮಾನವೀಯ ದೃಷ್ಟಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ದೊರಕಿದ್ದರೂ, ಹಾಡಿಗಳಿಗೆ ರಸ್ತೆ, ವಿದ್ಯುತ್ ಸೌಲಭ್ಯಗಳು ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದಿವಾಸಿ ಮತ್ತು ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಮಾತನಾಡಿ ಅರಣ್ಯ ಹಕ್ಕು ಕಾಯ್ದೆ ಸಂಪೂರ್ಣ ಅನುಷ್ಠಾನಗೊಂಡಿಲ್ಲ. ಕೃಷಿ ಚಟುವಟಿಕೆಗೆ ತುಂಬಾ ತೊಂದರೆಯಾಗಿದ್ದು, ಇದರಿಂದ ಅರಣ್ಯ ಹಕ್ಕು ಕಾಯ್ದೆಯ ನ್ಯಾಯಯುತ ಸವಲತ್ತುಗಳು ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿಯಿಂದ ತೊಂದರೆಗೊಳಗಾದ ಬುಡಕಟ್ಟು, ಆದಿವಾಸಿ ಜನಾಂಗದವರ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಎಲ್ಲರ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಇರುವವರಿಗೆ ಆರ್‍ಟಿಸಿ ನೀಡಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಕಂದಾಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ಬುಡಕಟ್ಟು ರೈತ ಕುಟುಂಬಗಳಿಗೆ ಬೆಳೆ ಪರಿಹಾರಕ್ಕೆ ಶೀಘ್ರ ಕ್ರಮವಹಿಸಬೇಕು. ಹಾಡಿಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುವುದರೊಂದಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್, ಅಂಗನವಾಡಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಡಕಟ್ಟು, ಆದಿವಾಸಿ ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಪಿಂಚಣಿ, ಆಧಾರ್ ಕಾರ್ಡ್, ಪಡಿತರ ಚೀಟಿ ಆಂದೋಲನ ನಡೆಸಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸುವುದು, ಗಂಗಾಕಲ್ಯಾಣ ಯೋಜನೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳು ಅರ್ಹ ಬುಡಕಟ್ಟು, ಆದಿವಾಸಿ, ಜನರಿಗೆ ತಲುಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬಸವನಹಳ್ಳಿ ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸ್ಮಶಾನ ಹಾಗೂ ತಾಲೂಕು ಮಟ್ಟದಲ್ಲಿ ಆದಿವಾಸಿ ಭವನ ನಿರ್ಮಾಣ, 94ಸಿ, 94ಸಿಸಿ ಅಡಿಯಲ್ಲಿ ಮನೆಗಳಿಗೆ ಹಕ್ಕುಪತ್ರ ನೀಡುವುದು, ಹಾಡಿಗಳಲ್ಲಿ ಗ್ರಾಮಸಭೆ ನಡೆಸುವುದು, ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಕೌಶಲ್ಯ ತರಬೇತಿ, ಕಾರ್ಯಕ್ರಮಗಳನ್ನು ನಡೆಸಿ ಸ್ವಾವಲಂಭಿಗಳಾಗಲು ತರಬೇತಿ ನೀಡುವುದು. ಹೀಗೆ ಹಲವು ಸುಧಾರಣೆಗಳನ್ನು ಮಾಡಿ ಮುಖ್ಯವಾಹಿನಿಗೆ ಬರುವಂತಾಗಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ, ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ತಹಶೀಲ್ದಾರ್ ಮಹೇಶ್, ತಾ.ಪಂ. ಇಒ ಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.