ಮಡಿಕೇರಿ, ಡಿ. 21: ಬಹುಜನ ವಿದ್ಯಾರ್ಥಿ ಸಂಘದಿಂದ ಜ. 26 ರವರೆಗೆ ರಾಜ್ಯವ್ಯಾಪಿ ನಡೆಯಲಿರುವ ಸಂವಿಧಾನ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ-2020’ನ್ನು ಆಯೋಜಿಸಲಾಗಿದೆ ಎಂದು ಸಂಘದ ಮುಖಂಡ ಮೋಹನ್ ಮೌರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನಾಂಗದಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ತಾಲೂಕು ಮಟ್ಟದಲ್ಲಿ 20 ಮಂದಿಯ ಪ್ರಬಂಧಗಳನ್ನು ಆಯ್ಕೆ ಮಾಡಿ ಜಿಲ್ಲಾಮಟ್ಟಕ್ಕೆ ಕಳುಹಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ 20 ಪ್ರಬಂಧಗಳನ್ನು ಆಯ್ಕೆಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತದೆ. ರಾಜ್ಯಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆಯುವವರಿಗೆ ಫೆ. 2 ರಂದು ಮೈಸೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆಂದು ತಿಳಿಸಿದರು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ‘ಭಾರತ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ’ ಎಂಬ ವಿಷಯದ ಕುರಿತು ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ರೂ. 25 ಸಾವಿರ, ದ್ವಿತೀಯ ರೂ. 15 ಸಾವಿರ, ತೃತೀಯ ರೂ. 5 ಸಾವಿರ ಹಾಗೂ 10 ವಿದ್ಯಾರ್ಥಿಗಳಿಗೆ ತಲಾ ರೂ. 2 ಸಾವಿರದಂತೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಪದವಿ ಮತ್ತು ಸ್ನಾತಕೋತ್ತರ ವಿಭಾಗಕ್ಕೆ ‘ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ’ ಎಂಬ ವಿಷಯದ ಕುರಿತು ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ರೂ.1 ಲಕ್ಷ, ದ್ವಿತೀಯ ರೂ. 50 ಸಾವಿರ, ತೃತೀಯ ರೂ. 25 ಸಾವಿರ ಹಾಗೂ 10 ವಿದ್ಯಾರ್ಥಿಗಳಿಗೆ ತಲಾ ರೂ. 5 ಸಾವಿರದಂತೆ ಸಮಾಧಾನಕರ ಬಹುಮಾನ ನೀಡಲಾಗುವುದೆಂದರು.
ಪದವಿಪೂರ್ವ ಕಾಲೇಜು ಹಾಗೂ ತತ್ಸಮಾನ ಕೋರ್ಸ್ ವಿದ್ಯಾರ್ಥಿಗಳಿಗೆ ‘ಭಾರತ ಸಂವಿಧಾನ ಪ್ರಸ್ತಾವನೆಯ ಮಹತ್ವ’ ಎಂಬ ವಿಷಯದ ಕುರಿತು ಸ್ಪರ್ಧೆ ನಡೆಯಲಿದ್ದು, ಪ್ರಥಮ ರೂ. 50 ಸಾವಿರ, ದ್ವಿತೀಯ ರೂ. 25 ಸಾವಿರ, ತೃತೀಯ ರೂ. 15 ಸಾವಿರ ಹಾಗೂ 10 ವಿದ್ಯಾರ್ಥಿಗಳಿಗೆ ತಲಾ ರೂ. 3 ಸಾವಿರದಂತೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯ ವಿದ್ಯಾರ್ಥಿಗಳು ಲಿಖಿತವಾಗಿ ಕಳುಹಿಸಿದ ಪ್ರಬಂಧಗಳನ್ನು ನುರಿತ ಸಂವಿಧಾನ ತಜ್ಞರು ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಿಂದ ಮೌಲ್ಯಮಾಪನ ಮಾಡಿಸಲಾಗುತ್ತದೆ. ಪ್ರೌಢಶಾಲಾ ಹಾಗೂ ಪದವಿಪೂರ್ವ ವಿಭಾಗಕ್ಕೆ ಸಾವಿರ ಪದ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು 2500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು. ಪ್ರಬಂಧವನ್ನು ಉಪನ್ಯಾಸಕರು ಅಥವಾ ಪೋಷಕರ ಸಹಾಯದಿಂದ ರಚಿಸಿದ್ದರು, ಅದು ವಿದ್ಯಾರ್ಥಿಯ ಸ್ವಹಸ್ತಾಕ್ಷರದಲ್ಲಿರಬೇಕು, ಂ4 ಹಾಳೆಯಲ್ಲಿ ನೀಲಿ ಅಥವಾ ಕಪ್ಪು ಶಾಹಿಯಿಂದ ಬರೆದಿರಬೇಕು, ಪ್ರಬಂಧದ ಮೊದಲ ಪುಟದಲ್ಲಿ ಹೆಸರು, ತರಗತಿ, ವಿದ್ಯಾಸಂಸ್ಥೆ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್‍ನ್ನು ಸ್ಪಷ್ಟವಾಗಿ ನಮೂದಿಸ ಬೇಕು, ಪ್ರಬಂಧÀವನ್ನು ಶಾಲಾ, ಕಾಲೇಜಿನ ಪ್ರಾಂಶುಪಾಲರ ಅಥವಾ ವಿಭಾಗದ ಮುಖ್ಯಸ್ಥರ ಸಹಿಯೊಂದಿಗೆ ಸಲ್ಲಿಸಬೇಕೆಂದು ವಿವರಗಳನ್ನಿತ್ತರು.
ಜನವರಿ 10ರ ಸಂಜೆ 6 ಗಂಟೆಯೊಳಗೆ ಪ್ರಬಂಧಗಳನ್ನು ಕಳುಹಿಸಿಕೊಡಬೇಕೆಂದು ತಿಳಿಸಿದ ಮೋಹನ್ ಮೌರ್ಯ, ಸೋಮವಾರಪೇಟೆ ತಾಲೂಕಿನ ಆಸಕ್ತರು ಪ್ರಬಂಧಗಳನ್ನು ‘ ಶ್ರೀ ಲಕ್ಷ್ಮೀ ಎಂಟರ್ ಪ್ರೈಸಸ್, ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್, ಮಸೀದಿ ರಸ್ತೆ, ಕೊಡ್ಲಿಪೇಟೆ-571231, ಸೋಮವಾರಪೇಟೆ ತಾಲೂಕು’ ಇಲ್ಲಿಗೆ ಕಳುಹಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ. 6362830860, 9480594421 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನ ವಿದ್ಯಾರ್ಥಿಗಳು ಪ್ರಬಂಧಗಳನ್ನು ‘ಹೆಚ್.ಎಸ್. ಪ್ರೇಮ್ ಕುಮಾರ್, ಎಲ್.ಐ.ಸಿ. ಪ್ರತಿನಿಧಿ, ಬಿ.ಎ. ರಾಮಯ್ಯ, ರೇಸ್‍ಕೋರ್ಸ್ ರಸ್ತೆ, ಮಡಿಕೇರಿ-571201’ ಕಳುಹಿಸಿಕೊಡಬೇಕು. ಈ ಬಗ್ಗೆ ಮಾಹಿತಿಗಾಗಿ ಮೊ.9972525977, 9741521197, 8431452672 ಸಂಖ್ಯೆಗೆ ಸಂಪರ್ಕಿಸಹುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಂಚಾಲಕರಾದ ಶರತ್ ಶಾಕ್ಯ, ರಾಜ್ಯ ಸಂಘದ ಸದಸ್ಯರಾದ ದಿನು ಬೋಜಪ್ಪ, ತಾಲೂಕು ಪದಾಧಿಕಾರಿ ಮದನ್ ಹಾಗೂ ಸದಸ್ಯ ದರ್ಶನ್ ಉಪಸ್ಥಿತರಿದ್ದರು.