ಮಡಿಕೇರಿ, ಡಿ. 20: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ತಳಿಹಳ್ಳ ಎಂಬಲ್ಲಿ ನಿನ್ನೆ ಕಾರೊಂದು ಅವಘಡಕ್ಕೀಡಾಗಿದ್ದು, ಕೊಡಗು ಮೂಲದ ವಿದ್ಯಾರ್ಥಿಯೋರ್ವ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಜಿಲ್ಲೆಯ ತೂಚಮಕೇರಿ ಮೂಲದ ವಿದ್ಯಾರ್ಥಿ ಆದರ್ಶ್ ಬೋಪಯ್ಯ (17) ಹಾಗೂ ಅಲ್ಲಿನ ಧ್ಯಾನ್‍ಗೌಡ (17) ಮೃತ ವಿದ್ಯಾರ್ಥಿಗಳು. ಇವರು ಅಲ್ಲಿನ ಎಂ.ಇ.ಎಸ್. ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ನಿನ್ನೆ ಎರಡು ಕಾರಿನಲ್ಲಿ ಪರಸ್ಪರ ಒಂದನ್ನೊಂದು ಹಿಂದಿಕ್ಕುವ ರೀತಿಯ ವೇಗದ ಚಾಲನೆ ಸಂದರ್ಭ ಕಾರೊಂದು ನಿಯಂತ್ರಣ ತಪ್ಪಿ ಅವಘಡಕ್ಕೀಡಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡು ಈ ಇಬ್ಬರು ಮೃತಪಟ್ಟಿದ್ದಾರೆ. ಮೃತ ಆದರ್ಶ್ ಅವರ ತಂದೆ ತೂಚಮಕೇರಿಯವರಾದ ಬೋಪಯ್ಯ ಅವರು ಮೂಡಿಗೆರೆಯಲ್ಲಿ ತೋಟವೊಂದರಲ್ಲಿ ವ್ಯವಸ್ಥಾಪಕ ರಾಗಿದ್ದು, ಕೆಲದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಮೊನ್ನೆ ಅವರ ತಿಥಿ ಕರ್ಮಾಂತರ ಜರುಗಿದ್ದು, ಅವರ ಒಬ್ಬರೇ ಪುತ್ರರಾಗಿದ್ದ ಆದರ್ಶ್ ನಿನ್ನೆಯಷ್ಟೆ ಕಾಲೇಜಿಗೆ ತೆರಳಿದ್ದರೆನ್ನ ಲಾಗಿದೆ. ಇದೀಗ ಅವಘಡದಲ್ಲಿ ಸಾವನ್ನಪ್ಪಿರುವದು ವಿಧಿಯಾಟ ವಾಗಿದೆ. ಮೃತರ ತಾಯಿ ನಳಿನಿ ಇದೀಗ ಏಕಾಂಗಿಯಾದಂತಾಗಿದ್ದು, ದುಃಖದ ಕಡಲಲ್ಲಿ ಮುಳುಗಿದ್ದಾರೆ. ಬೋಪಯ್ಯ ಅವರ ಸಹೋದರ ನಾಚಪ್ಪ ಮೈಸೂರಿನ ಗೋಕುಲಂನಲ್ಲಿ ನೆಲೆಸಿದ್ದು, ಆದರ್ಶ್ ಮೃತದೇಹವನ್ನು ಮೈಸೂರಿನಲ್ಲಿ ಇಂದು ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.