ಮಡಿಕೇರಿ, ಡಿ.20: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿರುವ ‘ಕೂರ್ಗ್ ವಿಲೇಜ್’ ಯೋಜನೆ ಸಂಬಂಧ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜ. 1ಕ್ಕೆ ಮುಂದೂಡಿದೆ.ರೂ. 98 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗಲಿದೆ; ಇದಕ್ಕೆ ಅವಕಾಶ ನೀಡಬಾರದೆಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಯೋಜನೆ ಬಗ್ಗೆ ಸೂಕ್ತ ದಾಖಲೆ ನೀಡುವಂತೆ ಪ್ರಿನ್ಸಿಪಲ್ ಮುನ್ಸಿಫ್ ಸಿವಿಲ್ ಜಡ್ಜ್ ಕಿರಿಯ ವಿಭಾಗದ ನಾಯಾಧೀಶರಾದ ಮನು ಅವರು ಸರಕಾರಿ ಅಭಿಯೋಜಕರಿಗೆ ಸೂಚಿಸಿದ್ದರು. ಅದರಂತೆ ಸರಕಾರಿ ಅಭಿಯೋಜಕರಾದ ಎನ್. ಶ್ರೀಧರನ್ ನಾಯರ್ ಅವರು ಇಂದು ದಾಖಲೆಗಳನ್ನು ಸಲ್ಲಿಸಬೇಕಿತ್ತು. ಆದರೆ ದಾಖಲೆ ಸಲ್ಲಿಕೆಯಾಗದ ಕಾರಣ ನ್ಯಾಯಾಧೀಶರು ಪ್ರಕರಣವನ್ನು ಜ. 1ಕ್ಕೆ ಮುಂದೂಡಿದ್ದಾರೆ. ಜ. 1 ರಂದು ವಕೀಲರು ದಾಖಲೆಗಳನ್ನು ಸಲ್ಲಿಸಲಿದ್ದಾರೆ.