ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ

ಉಡುಪಿ, ಡಿ. 20: ಪೇಜಾವರ ಮಠಾಧೀಶರಾದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಉಸಿರಾಟ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ನ್ಯುಮೋನಿಯಾಕ್ಕೆ ಆಂಟಿಬಯೋಟಿಕ್, ಇತರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಚಿಕಿತ್ಸಾ ತಂಡದ ಹಿರಿಯ ವೈದ್ಯೆ ಡಾ. ಸುಧಾ ವಿದ್ಯಾಸಾಗರ್ ತಿಳಿಸಿದ್ದಾರೆ. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿ ದ್ದಾರೆ ಎಂದು ತಿಳಿದುಬಂದಿದೆ. ತಾ. 21 ರಂದು ಅಮಿತ್ ಶಾ ಅವರು ಉಡುಪಿಗೆ ಆಗಮಿಸುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಕೂಡ ಮಂಗಳೂರಿ ನಿಂದ ಉಡುಪಿಗೆ ಹೋಗಿ ಶ್ರೀಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಆನ್‍ಲೈನ್ ಮೂಲಕ ಕಾಯ್ದೆ ಅನುಷ್ಠಾನ

ನವದೆಹಲಿ, ಡಿ. 20: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಗ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಆದರೆ ಪ್ರತಿಭಟನೆಗೂ ಬಗ್ಗದ ಮೋದಿ ಸರ್ಕಾರ, ಪೌರತ್ವ ಕಾಯ್ದೆ ಕೇಂದ್ರದ ವಿಷಯವಾಗಿದ್ದು, ಅದನ್ನು ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸುವುದಾಗಿ ಹೇಳಿದೆ. ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ, ಪಂಜಾಬ್, ಕೇರಳ, ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಢ್ ಸರ್ಕಾರಗಳು ಘೋಷಿಸಿವೆ. ಇನ್ನು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಸೇರಿದಂತೆ ಇತರ ರಾಜ್ಯಗಳು ಪೌರತ್ವ ಕಾಯ್ದೆ ಜಾರಿಗೊಳಿಸಬೇಕೆ, ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸಿವೆ. ಈ ಮಧೆ, ಪೌರತ್ವ ಕಾಯ್ದೆ ಕೇಂದ್ರದ ವಿಷಯವಾಗಿದ್ದು, ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯ ಹೊಣೆಗಾರಿಯನ್ನು ಕಡಿಮೆಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಬೂದಿ ಮುಚ್ಚಿದ ಕೆಂಡ

ಮಂಗಳೂರು, ಡಿ. 20: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾತ್ಮಕ ಪ್ರತಿಭಟನೆಯ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಸಧÀ್ಯಕ್ಕೆ ಅಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ, ಹಿಂಸಾಚಾರದ ಕುರಿತು ವರದಿ ಮಾಡಲು ಆಗಮಿಸಿದ್ದ ಕೇರಳ ಪತ್ರಕರ್ತರ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಬಳಿ ಇದ್ದ ಕ್ಯಾಮೆರಾ ಹಾಗೂ ಫೋನ್‍ಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ಅವರನ್ನು ಆದಷ್ಟು ಬೇಗ ಕೇರಳಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದಲ್ಲಿ ಗಾಯಗೊಂಡವರನ್ನು ದಾಖಲಿಸಲಾಗಿರುವ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಿಂದ ಸುದ್ದಿ ವಾಹಿನಿಯೊಂದು ಲೈವ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್. ಹರ್ಷಾ ಸಹ ಕಾಣಿಸಿಕೊಂಡಿದ್ದಾರೆ. ಈ ವೇಳೆ ವೀಡಿಯೋ ಮಾಡುತ್ತಿದ್ದ ಟಿವಿ ವರದಿಗಾರನನ್ನು ಪೊಲೀಸರು ಪ್ರಶ್ನಿಸಿ, ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ನಿಯೋಗ ಪೊಲೀಸ್ ವಶ

ಮಂಗಳೂರು, ಡಿ. 20: ಗೋಲಿಬಾರ್ ಹಾಗೂ ಪರಿಸ್ಥಿತಿಯ ಅವಲೋಕನಕ್ಕಾಗಿ ಮಂಗಳೂರಿಗೆ ತೆರಳಿದ್ದ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಮಂಗಳೂರಿಗೆ ತೆರಳಲು ಸಿದ್ಧತೆ ನಡೆಸಿ, ಶುಕ್ರವಾರ ಬೆಳಿಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೇತೃತ್ವದ ಮೊದಲ ತಂಡ ತೆರಳಿತ್ತು. ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಾಂಗ್ರೆಸ್ ನಿಯೋಗ ಗೋಲಿಬಾರ್‍ನಲ್ಲಿ ಮೃತಪಟ್ಟವರ ನಿವಾಸಕ್ಕೆ ತೆರಳಲು ಮುಂದಾದಾಗ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಆದರೆ ಕಾಂಗ್ರೆಸ್ ನಿಯೋಗ ಪಟ್ಟು ಹಿಡಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಮಂಗಳೂರು ವಿಮಾನ ನಿಲ್ದಾಣದಲ್ಲಿಯೇ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದು ಅವರನ್ನು ಮಂಗಳೂರು ನಗರದೊಳಗೆ ಬಿಟ್ಟುಕೊಳ್ಳಲಿಲ್ಲ.

ಸರಣಿ ಸ್ಫೋಟ : ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಜೈಪುರ, ಡಿ. 20: 2008ರ ಜೈಪುರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. 70 ಮಂದಿಯನ್ನು ಬಲಿ ಪಡೆದ 2008 ರಲ್ಲಿ ಸರಣಿ ಸ್ಫೋಟದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್, ಕಳೆದ ಬುಧವಾರ ಬಂಧಿತರ ಪೈಕಿ ನಾಲ್ವರು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ ಕೋರ್ಟ್, ಮೊಹಮ್ಮದ್ ಸೈಫ್, ಮೊಹಮ್ಮದ್ ಸರ್ವಾರ್ ಅಜ್ಮಿ, ಮೊಹಮ್ಮದ್ ಸಲ್ಮಾನ್ ಮತ್ತು ಸೈಫುರೆಹ್ಮಾನ್‍ಗೆ ಗಲ್ಲು ಶಿಕ್ಷೆ ವಿಧಿಸಿದೆ. 2008 ಮೇ 13 ರಂದು ರಾಜಸ್ಥಾನದ ಜೈಪುರದಲ್ಲಿ 8 ಪ್ರದೇಶಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ 70 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದರೆ, 185 ಮಂದಿ ಗಾಯಗೊಂಡಿದ್ದರು.

ಜಾರ್ಖಂಡ್‍ನಲ್ಲಿ ಶೇ. 62.77 ಮತದಾನ

ಜಾರ್ಖಂಡ್, ಡಿ. 20: ಜಾರ್ಖಂಡ್ ವಿಧಾನಸಭೆಯ ಐದನೇ ಹಾಗೂ ಅಂತಿಮ ಹಂತದ ಚುನಾವಣೆಯಲ್ಲಿ ಶುಕ್ರವಾರ 16 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮಧ್ಯಾಹ್ನ 3 ಗಂಟೆಗೆ ಮತದಾನ ಕೊನೆಗೊಂಡ 5 ಕ್ಷೇತ್ರಗಳಲ್ಲಿ ಸರಾಸರಿ ಶೇ. 62.77 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಮತದಾನ ಸಂಜೆ 5 ಗಂಟೆಯವರೆಗೆ ನಡೆದಿದ್ದು, ಶೇ. 60 ಕ್ಕೂ ಹೆಚ್ಚು ಮತದಾನವಾಗಿದೆ. ನಕ್ಸಲ್ ಪೀಡಿತ ಬೊರಿಯೊ, ಬರ್ಹೆಟ್, ಲಿಟ್ಟಿಪಾದ, ಮಹೇಶ್‍ಪುರ ಮತ್ತು ಶಿಕಾರಿಪಾದ ಕ್ಷೇತ್ರಗಳಲ್ಲಿ ಮಧ್ಯಾಹ್ನ 3ಗಂಟೆಗೆ ಮತದಾನ ಕೊನೆಗೊಂಡಿದೆ. ಮಹೇಶ್‍ಪುರದಲ್ಲಿ ಗರಿಷ್ಠ 70.4 ರಷ್ಟು ಮತದಾನವಾಗಿದ್ದು, ಡುಮ್ಕಾದಲ್ಲಿ ಕನಿಷ್ಟ 55.26ರಷ್ಟು ಮತದಾನವಾಗಿದೆ.

ಮೀರಾಬಾಯಿಗೆ ಚಿನ್ನದ ಪದಕ

ದೋಹಾ, ಡಿ. 20: 6ನೇ ಕತಾರ್ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಭಾರತ ಪದಕಗಳ ಖಾತೆ ತೆರೆದಿದ್ದು, ಮಾಜಿ ವಿಶ್ವ ಚಾಂಪಿಯನ್ ವೆಯ್ಟ್‍ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಒಲಿಂಪಿಕ್ ಅರ್ಹತಾ ಸ್ಪರ್ಧೆಯಲ್ಲಿ ಚಾನು 194 ಕೆ.ಜಿ. ಭಾರ ಎತ್ತುವ ಪ್ರಯತ್ನದೊಂದಿಗೆ ಚಿನ್ನ ಪಡೆದುಕೊಂಡಿದ್ದರು.

ಖೇಲೋ ಇಂಡಿಯಾಗೆ ಭರದ ಸಿದ್ಧತೆ

ದಿಸ್ಪೂರ್, ಡಿ. 20: ಕಳೆದ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಮೂರನೇ ಋತು ಮುಂದಿನ ವರ್ಷ ಜನವರಿ 10 ರಿಂದ 29 ರವರಗೆ ಗುವಾಹಟಿಯಲ್ಲಿ ನಡೆಯಲಿದ್ದು, ಈಗಾಗಲೇ ಪೂರ್ವ ಸಿದ್ಧತೆ ಆರಂಭಗೊಂಡಿದೆ. ಸುದ್ದಿ ಗೋಷ್ಠಿಯಲ್ಲಿ ಅಸ್ಸಾಂನ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನಾಶ್ ಜೋಷಿ ಮಾತನಾಡಿ, ದೇಶದ ದೊಡ್ಡ ಕ್ರೀಡಾಕೂಟ ಗುವಾಹಟಿ ಸಾಕ್ಷಿಯಾಗಲಿದೆ ಎಂದರು.

ಸಾಹಿತಿ ಎಲ್.ಎಸ್. ಶೇಷಗಿರಿರಾವ್ ನಿಧನ

ಬೆಂಗಳೂರು, ಡಿ. 20: ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು ಶುಕ್ರವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರು ಫೆಬ್ರವರಿ 16, 1925 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು. ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ಎಲ್‍ಎಸ್‍ಎಸ್ ಎಂದೇ ಪ್ರಸಿದ್ದರು.