ಮಡಿಕೇರಿ, ಡಿ. 20 : ಕೊಡಗಿನ ಕಥೆಗಾರ್ತಿ ದಿವಂಗತ ಗೌರಮ್ಮ ಅವರ ನೆನಪಿಗಾಗಿ ಅವರ ಪುತ್ರ ವಸಂತ್ ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣಕಥೆಗಳ ಸ್ಪರ್ಧೆ ನಡೆಸಲು ದತ್ತಿ ಸ್ಥಾಪಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ನವೆಂಬರ್, 30 ರಂದು ಸಣ್ಣ ಕಥೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕೆ.ಸಂಜನಾ ಪ್ರಥಮ ಸ್ಥಾನ ಗಳಿಸಿದ್ದಾಳೆ. ದ್ವಿತೀಯ ಸ್ಥಾನವನ್ನು ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಪ್ರಗತಿ ಕೆ.ಎಸ್., ತೃತೀಯ ಸ್ಥಾನವನ್ನು ಸೋಮವಾರಪೇಟೆ ಸಂತ ಜೋಸೇಫರ ಪ್ರೌಢಶಾಲೆಯ ದರ್ಶನ್ ಬಿ.ಎಂ. ಗಳಿಸಿದ್ದಾನೆ ಹಾಗೂ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಅಜ್ಮಿಯಾ ಎನ್.ಎ, ಅಫ್ರೀನ ಡಿ.ಎ ಮತ್ತು ಕೆ.ಎಂ.ಗಾಯತ್ರಿ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ಬಹುಮಾನವನ್ನು ತಾ. 28 ರಂದು ಆಯೋಜಿಸಿರುವ ದಿ. ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ.