ಗೋಣಿಕೊಪ್ಪಲು, ಡಿ.20, ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂಬುಕೊಲ್ಲಿಯಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಲಾಗಿದೆ. ಲಾಟರಿ ಟಿಕೇಟುಗಳು ಮತ್ತು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಲಾಟರಿ ಟಿಕೇಟುಗಳ ಮಾರಾಟ ನಿಷೇಧ ಗೊಂಡಿದ್ದರೂ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಕೇಂಬುಕೊಲ್ಲಿಯಲ್ಲಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆ ಕುಟ್ಟ ಪೊಲೀಸ್ ಠಾಣಾಧಿಕಾರಿ ಹೆಚ್.ಜೆ. ಚಂದ್ರಪ್ಪ ಸಿಬ್ಬಂದಿ ಗಳೊಂದಿಗೆ ದಾಳಿ ಮಾಡಿ ರಸ್ತೆ ಬದಿಯಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ಕುಟ್ಟ ಗ್ರಾಮದ ನಿವಾಸಿ ಎಂ. ರಾಜ ಎಂಬಾತನನ್ನು ಬಂದಿಸಿ ಮೊಕದ್ದಮೆ ದಾಖಲಿಸಿದ್ದಾರೆ. ಆತನ ಬಳಿ ಇದ್ದ ರೂ 6,000 ಮೌಲ್ಯದ ಕೇರಳ ರಾಜ್ಯದ ಲಾಟರಿ ಟಿಕೇಟು ಮತ್ತು ಆತ ಉಪಯೋಗಿಸಿದ ಮೋಟಾರು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭದಲ್ಲಿ ಕುಟ್ಟ ಎ.ಎಸ್.ಐ. ಹೆಚ್.ಕೆ. ಸಣ್ಣಪ್ಪ, ಮುಖ್ಯ ಪೇದೆ ರಾಜೇಶ್, ಪೇದೆ ಬಿ.ಎಸ್. ಮೋಹನ್ ಕುಮಾರ್, ವಾಹನ ಚಾಲಕ ಕೆ.ಟಿ.ಮೋಹನ್ ಕುಮಾರ್ ಇದ್ದರು ಕುಟ್ಟ ವಲಯದ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.