ಪಾಲಿಬೆಟ್ಟ, ಡಿ. 20: ಕಳೆದ ಹಲವು ವರ್ಷಗಳಿಂದಲೂ ವಿದ್ಯುತ್ ಬೆಳಕು ಕಾಣದೆ ಕತ್ತಲಾಗಿದ್ದ ಗ್ರಾಮಕ್ಕೆ ಇದೀಗ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ತೀಕರಣ ಯೋಜನೆಯಡಿ ಮಾಲ್ದಾರೆ ಹಾಗೂ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಹಾಡಿಗಳಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ದಿಡ್ಡಳ್ಳಿ ಹಾಡಿಯಲ್ಲಿ ವಿದ್ಯುತ್ ಕಂಬವನ್ನು ಉದ್ಘಾಟಿಸಿ ನಂತರ ಮಾತನಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದ ಮಹಾತ್ವಾಂಕ್ಷೆಯ ಯೋಜನೆಯಾದ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ತೀಕರಣ ಹಾಗೂ ಸೌಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಕುಗ್ರಾಮಗಳಲ್ಲಿ ವಿದ್ಯುತ್ ಬೆಳಕು ಕಂಡಿದ್ದು, ಮುಂದಿನ ದಿನಗಳಲ್ಲಿ ಇತರ ಗ್ರಾಮಗಳನ್ನು ವಿದ್ಯುತ್ತೀಕರಣಗೊಳಿಸಲಾಗುವುದು ಎಂದ ಅವರು, ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ ಜಿಲ್ಲೆಗೆ ಹದಿನಾರು ಕೋಟಿ ಅನುದಾನ ಬಂದಿದ್ದು, ಇದರಲ್ಲಿ ವೀರಾಜಪೇಟೆ ತಾಲೂಕಿಗೆ ಆರು ಕೋಟಿಗಳ ಅನುದಾನದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ತೀಕರಣ ಗೊಳಿಸಲಾಗಿದೆ ಹಲವೆಡೆ ಅರಣ್ಯ ಇಲಾಖೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟಾಗುತ್ತಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು

ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಈ ಸಂದರ್ಭ ಚೆಸ್ಕಾಂ ಇಲಾಖಾಧಿಕಾರಿ ಸುರೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಇಂಜಿನಿಯರ್ ಮಹದೇವ, ಬಿಜೆಪಿ ಪ್ರಮುಖ ಮಧುದೇವಯ್ಯ, ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅರುಣಾ, ಕಾವೇರಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರವಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.