ಗೋಣಿಕೊಪ್ಪಲು, ಡಿ. 20: ಬಾಳೆಲೆ ಹೋಬಳಿ ನೂತನ ಕಂದಾಯ ಕಚೇರಿಯ ಅನುದಾನ ವಾಪಾಸ್ಸು ಹೋಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಟ್ಟಗೇರಿಯ ಅರಮಣಮಾಡ ಸತೀಶ್ ದೇವಯ್ಯ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಇವರು ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ ಹಾಗೂ ನಿಟ್ಟೂರು ಪಂಚಾಯ್ತಿಗಳ ವ್ಯಾಪ್ತಿಯು ಅಡಕಗೊಂಡಿದ್ದು ಈ ಭಾಗದ ಸಾವಿರಾರು ಮಂದಿಗೆ ಬಾಳೆಲೆ ಪಟ್ಟಣದಲ್ಲಿ ನೂತನ ಕಂದಾಯ ಕಚೇರಿಯ ಕಟ್ಟಡ ಅನುಕೂಲವಾಗಲಿದೆ ಎಂದು ಗಮನ ಸೆಳೆದಿದ್ದಾರೆ.

ಸರ್ಕಾರ ಈಗಾಗಲೇ ರೂ. 18 ಲಕ್ಷ ಅನುದಾನದಲ್ಲಿ ಕಾಮಗಾರಿ ಆರಂಭಿಸಿದ್ದು ಕಟ್ಟಡದ ಅಡಿಪಾಯ ಕಾಮಗಾರಿ ಮುಗಿದಿದೆ. ಜಿಲ್ಲಾಧಿಕಾರಿಗಳು ಕೂಡಲೇ ಕಾಮಗಾರಿ ಮುಂದುವರೆಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುವ ಮೂಲಕ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಯುವಂತೆ ಕ್ರಮ ಕೈಗೊಂಡು ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.