ನಾಪೋಕ್ಲು, ಡಿ. 20: ನಮ್ಮ ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿರುವ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ಉಳಿಸಿ ಕೊಂಡು ಪಠ್ಯದಲ್ಲಿನ ಅಂಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಕರೆ ನೀಡಿದರು.
ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿತ್ಯ ಜೀವನದಲ್ಲಿನ ಚಟುವಟಿಕೆಗಳಲ್ಲಿ, ಕೆಲಸ ಕಾರ್ಯಗಳಲ್ಲಿ ಇರುವ ವೈಜ್ಞಾನಿಕ ತತ್ವವನ್ನು ಅವಶ್ಯವಾಗಿ ತಿಳಿದು ಕೊಳ್ಳಬೇಕು. ವೈಜ್ಞಾನಿಕ ವಿಷಯಗಳನ್ನು ಯುಕ್ತವಾಗಿ ಬಳಸಿಕೊಳ್ಳಬೇಕು. ವೈಜ್ಞಾನಿಕ ಪ್ರಗತಿಯೊಂದಿಗೆ ಮೌಢ್ಯದಿಂದ ದೂರವಿರಬೇಕು ಎಂದರು. ಪ್ರಾಕೃತಿಕ ಸಂಪನ್ಮೂಲಗಳನ್ನು ಅವಶ್ಯಕತೆಗೆ ತಕ್ಕಷ್ಟು ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಪರಿಸರದ ಸಂಪನ್ಮೂಲಗಳನ್ನು ಮಿತಿಮೀರಿ ಬಳಕೆ ಮಾಡಿ ಮನುಷ್ಯರು ಇಂದು ಭೂಮಿಯನ್ನು ಕಸದ ತೊಟ್ಟಿ ಮಾಡಿದ್ದಾರೆ. ಮಾಲಿನ್ಯವನ್ನು ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸಿದ್ದಾರೆ. ಪ್ರಕೃತಿ ತನ್ನಮೇಲಿನ ದೌರ್ಜನ್ಯವನ್ನು ಮುನಿಸು ತೋರುವುದರ ಮೂಲಕ ಮಾನವ ಕುಲಕ್ಕೆ ಎಚ್ಚರಿಕೆ ನೀಡುತ್ತಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಮಸ್ಯೆಗಳೊಂದಿಗೆ ಜೀವನ ಸಾಗಿಸಬೇಕಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ರವಿಶಂಕರ್ ಮಾತನಾಡಿ ಜನತೆ ಮತ್ತು ವಿಜ್ಞಾನ ನಾಣ್ಯದ ಎರಡು ಮುಖಗಳಂತೆ. ದೈನಂದಿನ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ. ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಲ್ಲಿ ನೋಡಿದರೆ ಜೀವನ ನಿರ್ವಹಣೆ ಸುಲಭ ಎಂದರು. ವಿಜ್ಞಾನ ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಲ್ಲ.
ನಿತ್ಯ ಜೀವನದಲ್ಲಿನ ಪ್ರಸಂಗಗಳನ್ನು ಗ್ರಹಿಸುವ ಆಲೋಚಿಸುವ ಚಿಂತಿಸುವ ಶಕ್ತಿ ಬೆಳೆಸಿಕೊಂಡು ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಸಿಕೊಳ್ಳಬೇಕು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಧ್ಯೇಯ ವಾಕ್ಯವಾದ ಜನತೆಗಾಗಿ ವಿಜ್ಞಾನ ವಿಜ್ಞಾನಕ್ಕಾಗಿ ಜನತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು. ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ವನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ವಿವೇಕಾನಂದ ಯೂತ್ ಮೂವ್‍ಮೆಂಟಿನ ಮಡಿಕೇರಿ ತಾಲೂಕು ವಿಜ್ಞಾನ ಸಂಯೋಜಕ ರವಿ ಸ್ವಾಗತಿಸಿ ವಂದಿಸಿದರು. ಸ್ಪರ್ಧೆಯ ವಿಜೇತರಿಗೆ ರೋಟರಿ ಮಿಸ್ಟಿ ಹಿಲ್ಸ್‍ನ ಸದಸ್ಯ ಕುಲ್ಲೇಟಿರ ಅಜಿತ್ ನಾಣಯ್ಯ ಹಾಗೂ ಇಸಿಒ ಹರೀಶ್ ಬಹುಮಾನ ವಿತರಿಸಿದರು.