ಸುಂಟಿಕೊಪ್ಪ, ಡಿ. 19: ಸಂತ ಅಂತೋಣಿ ದೇವಾಲಯದಲ್ಲಿ ಕದಿರು ಹಬ್ಬವನ್ನು ಆಚರಿಸಲಾಯಿತು. ಕೊಡಗಿನ ಹುತ್ತರಿ ಹಬ್ಬವನ್ನು ಹೋಲುವ ಮಾದರಿಯಲ್ಲೇ ಈ ಮಾತೆಯ ಹಬ್ಬವನ್ನು ಭತ್ತದ ತೆನೆಯನ್ನು ಕೊಯ್ದು ದೇವಾಲಯಕ್ಕೆ ತರುವ ಮೂಲಕ ಶ್ರದ್ಧಾಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ಪನ್ಯದ ರೈತರಾದ ಸಿಮೋನ್ ಡಿಸೋಜ ಅವರ ಗದ್ದೆಗೆ ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ಫಾದರ್ ಎಡ್ವರ್ಡ್ ವಿಲಿಯಂ ಸಲ್ಡಾನ ಅವರೊಂದಿಗೆ ಸಂತ ಕ್ಲಾರ ಕನ್ಯಾಸ್ತ್ರಿ ಮಟ್ಟದ ಕನ್ಯಾಸ್ತ್ರಿಯರು ಹಾಗೂ ಕ್ರೈಸ್ತ ಭಾಂದವರು ಪ್ರಾರ್ಥನೆಯನ್ನು ಸಲ್ಲಿಸಿ ಅನಂತರ ಭತ್ತದ ಗದ್ದೆಯಲ್ಲಿನ ಪೈರಿಗೆ ಪ್ರಾರ್ಥಿಸಿ, ಆಶಿರ್ವಚಿಸಿ ಭತ್ತದ ಫೈರನ್ನು ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನ ಅವರು ಕದಿರು ತೆಗೆದರು. ಅನಂತರ ಮೆರವಣಿಗೆಯಲ್ಲಿ ಪ್ರಾರ್ಥನೆಯೊಂದಿಗೆ ಭಕ್ತ ಭಾಂದವರು ಸಂತ ಅಂತೋಣಿ ದೇವಾಲಯದಲ್ಲಿ ಪೈರನ್ನು ಇಟ್ಟು ಪ್ರಾರ್ಥನೆ ಹಾಗೂ ಆಡಂಬರದ ದಿವ್ಯ ಬಲಿಪೂಜೆಯನ್ನು ಧರ್ಮ ಕೆಂದ್ರದ ಧರ್ಮ ಗುರುಗಳು ನೇರವೇರಿಸಿದರು. ಭತ್ತದ ತೆನೆಗಳನ್ನು ಕ್ರೈಸ್ತ ಭಾಂದವರಿಗೆ ಧರ್ಮಗುರುಗಳು ವಿತರಿಸಿದರು. ರಾತ್ರಿ ಭೋಜನವನ್ನು ಭಕ್ತಾದಿಗಳಿಗೆ ನೀಡಲಾಯಿತು.