ಚೆಟ್ಟಳ್ಳಿ, ಡಿ. 19: ವೀರಾಜ ಪೇಟೆಯ ಅನ್ವಾರ್ ಪಬ್ಲಿಕ್ ಶಾಲೆಯ ಸ್ಕೌಟ್ ತಂಡದ ಉದ್ಘಾಟನಾ ಸಮಾರಂಭ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೀರಾಜಪೇಟೆ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಮುತ್ತಣ್ಣ ಸಸಿಗೆ ನೀರು ಹಾಕುವುದರ ಮೂಲಕ ನೆರವೇರಿಸಿದರು. ವಿದ್ಯಾರ್ಥಿಗಳು ಸ್ಕೌಟ್‍ನಂತಹ ಪ್ರತಿಭೆಯಿಂದ ದೇಶಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಶಾಲೆಯ ವ್ಯವಸ್ಥಾಪಕ ಮುಹಮ್ಮದ್ ಶಾಫಿ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ಅವರು, ವಿದ್ಯಾರ್ಥಿಗಳು ಮೊದಲು ಬದುಕಿನಲ್ಲಿ ಶಿಸ್ತನ್ನು ರೂಪಿಸಿಕೊಳ್ಳಬೇಕು, ಆಗ ಮಾತ್ರ ವಿದ್ಯೆ ಫಲಪ್ರದವಾಗುವುದು ಎಂದರು.

ಕರ್ನಾಟಕದ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಇದರ ಪ್ರಧಾನ ಕಾರ್ಯದರ್ಶಿ ಸಿ.ಎ. ಯಾಕೂಬ್ ಮಾಸ್ಟರ್ ಕೊಳಕೇರಿ ಅವರು ಮಾತನಾಡಿ, ದೇಶದ ಪರಂಪರೆಯಲ್ಲಿ ಸ್ಕೌಟ್‍ನ ಪಾತ್ರ ಬಹಳ ದೊಡ್ಡದು ಮತ್ತು ವಿದ್ಯಾರ್ಥಿಗಳು ಇಂತಹ ಪ್ರತಿಭೆಗಳಿಂದ ರಾಷ್ಟ್ರ ನಿರ್ಮಾಣವನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಕಾರ್ಯದರ್ಶಿಗಳಾದ ಲಿಯಾಕತ್ ಆಲಿ ಗುಂಡಿಗೆರೆ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲಾ ಆಡಳಿತ ಮಂಡಳಿ ಸದಾ ಪ್ರೋತ್ಸಾಹ, ಪ್ರಚೋದನೆ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಲು ಉತ್ತಮ ಮಾರ್ಗ ಸ್ಕೌಟ್ ಆಗಿದೆ ಎಂದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಸುಮಯ್ಯಾ ವೈ.ವೈ, ಜೀವಿತ, ಕುಸುಮ, ಜಯಂತಿ, ಸಜನಾ, ಸುಕನ್ಯಾ, ಪೂರ್ಣಿಮಾ, ಕೆ.ಎಂ. ಸಮಯ್ಯಾ, ಶಾಝಿಯಾ, ಆಬಿದಾ, ಸ್ನೇಹ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಚಂದ್ರಕುಮಾರ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಇಬ್ರಾಹಿಂ ಮಾಸ್ಟರ್ ವಂದಿಸಿದರು. ಸ್ಕೌಟ್ ತರಬೇತುದಾರ ಕೆ.ಆರ್. ರಿಶಾ ಕಾರ್ಯಕ್ರಮ ನಿರೂಪಿಸಿದರು.