ಗುಡ್ಡೆಹೊಸೂರು, ಡಿ. 19: ಇಲ್ಲಿನ ಗ್ರಾಮ ಪಂಚಾಯಿತಿಯ ಮಹಿಳಾ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು.

ಈ ಸಂದರ್ಭ ಭಾರತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ನಡುವೆ ಇರದೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಅಲ್ಲದೆ ಸರಕಾರ ಮಹಿಳಾ ಮೀಸಲಾತಿಯನ್ನು ನೀಡಿ ಸಮಾಜದಲ್ಲಿ ಪುರುಷರಂತೆ ಸಮಾನತೆ ಕಾಪಾಡಬೇಕು ಎಂದು ತಿಳಿಸಿದರು. ಅಲ್ಲದೆ ಮಹಿಳಾ ಸಂಘಗಳ ಮೂಲಕ ಮಹಿಳೆಯರು ಮುಂದೆ ಬರಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯೆ ಡಾಟಿ ಮಾತನಾಡಿ, ತಾನು ಸ್ತ್ರೀ ಶಕ್ತಿ ಸಂಘದ ಮೂಲಕ ಉತ್ತಮ ಜೀವನ ನಡೆಸಲು ಸಾಧ್ಯವಾಯಿತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಿ.ಡಿ.ಓ. ಶ್ಯಾಂ ಪ್ರಾಸ್ತಾವಿಕ ನುಡಿಯಾಡಿದರು. ಸಮಾಜದಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಮುಂದುವರಿದಿದ್ದಾರೆ ಎಂಬದಕ್ಕೆ ಕೊಡಗಿನಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಉದಾಹರಣೆಯಾಗಿದ್ದಾರೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಡಾಟಿ, ಕವಿತಾ, ಸುನೀತಾ, ಪಾರ್ವತಿ ಮತ್ತು ಕಾವೇರಪ್ಪ ಅವರುಗಳು ಉಪಸ್ಥಿತರಿದ್ದರು.

ಈ ಸಂದರ್ಭ ಗ್ರಾಮ ಪಂಚಾಯಿತಿಯ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಹಾಜರಿದ್ದರು. ಸಭೆಯಲ್ಲಿ ಕಾರ್ಯದರ್ಶಿ ನಂಜುಂಡೇಸ್ವಾಮಿ ಮತ್ತು ಗ್ರಾ.ಪಂ. ಸಿಬ್ಬಂದಿಗಳಾದ ಕೌಶಿಕ್ ಮತ್ತು ವಿಜಯ ಹಾಜರಿದ್ದರು. ವಾರ್ತಾ ಇಲಾಖೆ ವತಿಯಿಂದ ಮಹಿಳಾ ಸಬಲೀಕರಣದ ಬಗ್ಗೆ ನಾಟಕ ಏರ್ಪಡಿಸಲಾಗಿತ್ತು.