ಸಿದ್ದಾಪುರ, ಡಿ. 19: ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಯೊಂದು ಆಕಸ್ಮಿಕವಾಗಿ ಜಾರಿ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಎನ್.ಟಿ. ಪೊನ್ನಪ್ಪ ಸಿದ್ದಾಪುರ, ಡಿ. 19: ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಯೊಂದು ಆಕಸ್ಮಿಕವಾಗಿ ಜಾರಿ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಎನ್.ಟಿ. ಪೊನ್ನಪ್ಪ ನರಳಾಟದ ಶಬ್ದವನ್ನು ಕೇಳಿದ ಸ್ಥಳೀಯರು ಕಾಡಾನೆಯ ಬಳಿ ತೆರಳಿ ನೋಡಿದಾಗ ಕಾಡಾನೆಯು ನರಳಾಟ ಕಂಡು ಬಂದಿದೆ. ಕಳೆದ ರಾತ್ರಿ ಕಾಡಾನೆಯು ತೋಟದ ಒಳಗೆ ಬಿದ್ದಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಡಾನೆಯು ಬಿದ್ದಿರುವ ಘಟನೆಯ ಬಗ್ಗೆ ಅರಣ್ಯಾಧಿಕಾರಿಯವರಿಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖಾ ಅಧಿಕಾರಿ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

(ಮೊದಲ ಪುಟದಿಂದ) ನಂತರ ವನ್ಯ ಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಅವರನ್ನು ಕರೆಸಲಾಯಿತು. ಮುಜೀಬ್ ಅವರು ಕಾಡಾನೆಗೆ ಚಿಕಿತ್ಸೆಯನ್ನು ನೀಡಿದರು. ಚಿಕಿತ್ಸೆಗೆ ಕಾಡಾನೆಯು ಸ್ಪಂದಿಸದೇ ಬಿದ್ದ ಸ್ಥಳದಲ್ಲೇ ಗುಂಡಿಯಲ್ಲಿ ಕೈಕಾಲುಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿತ್ತು. ಕಾಡಾನೆಯು ಒಂದು ಬದಿಯಿಂದ ಮೇಲಕ್ಕೇಳಲು ಸಾಧ್ಯವಾಗದೇ ಸಾಕಷ್ಟು ಸಮಯ ಬಿದ್ದ ಜಾಗದಲ್ಲೇ ಒದ್ದಾಡಿದ ಪರಿಣಾಮ ಜಾಗದಲ್ಲಿ ಗುಂಡಿಗಳಾಗಿದೆ. ಆನೆಯು ನೋವಿನಿಂದ ನರಳಾಡುತ್ತಾ ಘೀಳಿಡುವ ದೃಶ್ಯ ಮನಕಲಕುವಂತಿದೆ. ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುವ ಸಂದರ್ಭ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಬಿದ್ದಿರುವ ಜಾಗದಿಂದ ಮರಗಳ ಕಂಬಗಳಿಂದ ಮೇಲಕ್ಕೆತ್ತಲು ಹಲವಾರು ಬಾರಿ ಪ್ರಯತ್ನಿಸಿದರೂ ಆಗಲಿಲ್ಲ. ಆದರೆ ಗ್ಲೂಕೋಸ್ ಹಾಗೂ ಇಂಜೆಕ್ಷನ್ ನೀಡುವ ಸಂದರ್ಭ ಆನೆಯು ತನ್ನ ಶರೀರವನ್ನು ಅಲುಗಾಡಿಸುತ್ತಿತ್ತು. ಆದರೆ ಬಿದ್ದ ಸ್ಥಳದಿಂದ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕಾಡಾನೆಯನ್ನು ಮೇಲಕ್ಕೆತ್ತಲು ಹಾಗೂ ಹೆಚ್ಚಿನ ಚಿಕಿತ್ಸೆ ನೀಡುವ ಉದ್ದೇಶದಿಂದ ದುಬಾರೆಯ ಸಾಕಾನೆ ಶಿಬಿರದಿಂದ ಸಾಕಾನೆಗಳಾದ ಗೋಪಿ, ಧನಂಜಯ, ಏಕದಂತ, ಲಕ್ಷ್ಮಣ, ಇಂದ್ರ ಆನೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ನಂತರ ಐದು ಸಾಕಾನೆಗಳು ಸೇರಿ ನೆಲಕ್ಕೆ ಬಿದ್ದಿದ್ದ ಕಾಡಾನೆಯನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಕಾಡಾನೆಯು ಮೇಲಕ್ಕೇಳಲೇ ಇಲ್ಲ. ಕಾಡಾನೆಯು ಜಾರಿ ಬಿದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಕಾಡಾನೆಯ ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅದು ನಿತ್ರಾಣಗೊಂಡು ಜಾರಿ ಬಿದ್ದಿದೆ. ಚಳಿಗಾಲದ ಸಂದರ್ಭ ಇಂತಹ ಘಟನೆಗಳು ಕಂಡು ಬರುತ್ತದೆ ಎಂದು ಮಾಹಿತಿ ನೀಡಿದರು. ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು ಇದೇ ಜಾಗದಲ್ಲಿ ಚಿಕಿತ್ಸೆಗೆ ಸ್ಪಂದಿಸದಿದ್ದಲ್ಲಿ ಮೇಲಾಧಿಕಾರಿಗಳ ಅನುಮತಿ ಮೇರೆಗೆ ಬೇರೆಡೆ ಚಿಕಿತ್ಸೆ ನೀಡಲಾಗುವದೆಂದು ತಿಳಿಸಿದರು.

ಕಾಡಾನೆಗಳನ್ನು ಸೆರೆಹಿಡಿಯಲು ಗ್ರಾಮಸ್ಥರ ಒತ್ತಾಯ: ವಾಲ್ನೂರು, ತ್ಯಾಗತ್ತೂರು ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಡಾನೆಗಳ ಹಿಂಡು ಗದ್ದೆಯಲ್ಲಿ ಬೆಳೆಸಿದ ಭತ್ತದ ಕೃಷಿಗಳನ್ನು ತಿಂದು ಧ್ವಂಸಗೊಳಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಕಾಡಾನೆಗಳ ಹಾವಳಿಯಿಂದಾಗಿ ವಾಲ್ನೂರು, ತ್ಯಾಗತ್ತೂರು ಗ್ರಾಮಗಳಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ಆತಂಕ ಸೃಷ್ಠಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮಸ್ಥರಾದ ಮುಂಡ್ರುಮನೆ ಬಿದ್ದಪ್ಪ ಮಾತನಾಡಿ ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪ ವಲಯಾರಣ್ಯಾಧಿಕಾರಿ ಸುಬ್ರಾಯ, ಕನ್ನಂಡ ರಂಜನ್, ಶಂಕರ್ ವಿಭೂತಿ, ಹಾಗೂ ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.

-ವಾಸು