ಭಾಗಮಂಡಲ, ಡಿ. 19: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಎರಡೂವರೆ ತಿಂಗಳ ಗಂಡು ಮಗುವೊಂದು ಚುಚ್ಚು ಮದ್ದು ಪಡೆದ ಕೆಲವೇ ಹೊತ್ತಿನಲ್ಲಿ ಮರಣಪಟ್ಟಿರುವ ಕರುಣಾಜನಕ ದುರ್ಘಟನೆಯೊಂದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ. ಮೂರ್ನಾಡು ಸಮೀಪದ ಮುತ್ತಾರ್ಮುಡಿ ಗ್ರಾಮದ ತೆಕ್ಕಡೆ ಅಶೋಕ್‍ಕುಮಾರ್ ಹಾಗೂ ತೇಜಸ್ವಿನಿ ದಂಪತಿಯ ಮಗು ಮನ್ವಿತ್ ಈ ದುರ್ದೈವಿ. ಇಂದು ಬೆಳಿಗ್ಗೆ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗು ಮನ್ವಿತ್ ಸಹಿತ ಇತರ ಏಳು ಮಂದಿ ಶಿಶುಗಳಿಗೆ ಈ ಚುಚ್ಚುಮದ್ದು ನೀಡಲಾಗಿದೆ.ಅಂತೆಯೇ ಚುಚ್ಚುಮದ್ದು ನೀಡಿದ ಬಳಿಕ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮಗುವನ್ನು ಆರೋಗ್ಯ ಕೇಂದ್ರದಲ್ಲಿ ತಾಯಿಯೊಂದಿಗೆ ಇರಿಸಿಕೊಂಡು; ಆ ಬಳಿಕ ಮನೆಗೆ ಕಳುಹಿಸಿಕೊಡಲಾಗಿದೆ. ಆ ವೇಳೆಗೆ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಪೋಷಕರು ಮತ್ತೆ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಈ ವೇಳೆ ಇಲ್ಲಿನ ವೈದ್ಯೆ ಡಾ. ಪೊನ್ನಮ್ಮ ಪರಿಶೀಲಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಸಲಹೆ ಮಾಡಿದ್ದಾರೆ.ಅಂತೆಯೇ ಮಗುವಿಗೆ ಎರಡೂವರೆ ತಿಂಗಳಲ್ಲಿ ನೀಡುವ ಚುಚ್ಚುಮದ್ದು ನೀಡಿರುವ ಅಲ್ಲಿನ ಶುಶ್ರೂಷಕಿ ವಸಂತಿ ಸಹಿತ ಪೋಷಕರೊಂದಿಗೆ ಬಂದಿದ್ದು; ಮಡಿಕೇರಿಯ ಖಾಸಗಿ ಆಸ್ಪತ್ರೆಗೆ ತೆರಳಿ ವೈದ್ಯರು ಲಭಿಸದೆ ಸರಕಾರಿ ಆಸ್ಪತ್ರೆಗೆ ತಂದು ವೈದ್ಯರು ನೋಡುವಷ್ಟರಲ್ಲಿ ಮನ್ವಿತ್ ಅಸುನೀಗಿರುವದು ಖಾತರಿಯಾಗಿದೆ.

ಬಂಧುವರ್ಗ ಆಕ್ರೋಶ : ಈ ಹಿಂದೆ ಭಾಗಮಂಡಲ ಆರೋಗ್ಯ ಕೇಂದ್ರದಲ್ಲಿ ಒಂದೂವರೆ ತಿಂಗಳಿಗೆ ನೀಡುವ ಚುಚ್ಚುಮದ್ದಿನಿಂದ ಯಾವದೇ ತೊಂದರೆಯಿಲ್ಲದೆ ಆರೋಗ್ಯದಿಂದಿದ್ದ ಮಗು; ಇಂದು ಎರಡೂವರೆ ತಿಂಗಳ ಅವಧಿಯಲ್ಲಿ ನೀಡುವ ಚುಚ್ಚುಮದ್ದು ಪಡೆದ ಬಳಿಕ ಅಸ್ವಸ್ಥಗೊಂಡು ಕೊನೆಯುಸಿರೆಳೆದಿರುವ ಬಗ್ಗೆ ಬಂಧುವರ್ಗ ಆಕ್ರೋಶಗೊಂಡಿದೆ. ಜಿಲ್ಲಾ ಆಸ್ಪತ್ರೆಯ ಶವಾಗಾರ ಬಳಿ ಜಮಾಯಿಸಿ ಆಕ್ರಂದನದೊಂದಿಗೆ ಭಾಗಮಂಡಲದ ವೈದ್ಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಪೊಲೀಸರಿಗೆ ದೂರು : ತಂದೆ ತೆಕ್ಕಡೆ ಅಶೋಕ್ ಕುಮಾರ್, ಮಗುವಿನ ಸಾವಿನ ಬಗ್ಗೆ ಸೂಕ್ತ ಕ್ರಮಕ್ಕೆ ಕೋರಿ ಪೊಲೀಸ್ ಪುಕಾರು ನೀಡಿದ್ದು; ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಭಾಗಮಂಡಲ ಠಾಣಾಧಿಕಾರಿ ಮಹದೇವ್ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

(ಮೊದಲ ಪುಟದಿಂದ)

ವೈದ್ಯಾಧಿಕಾರಿ ಸ್ಪಷ್ಟನೆ : ಘಟನೆ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಆರ್. ಮೋಹನ್ ಪ್ರತಿಕ್ರಿಯೆ ನೀಡಿ; ರಾಷ್ಟ್ರೀಯ ಚುಚ್ಚುಮದ್ದು ಕಾರ್ಯಕ್ರಮದಡಿ ಇದೇ ಮಗುವಿಗೆ ಒಂದೂವರೆ ತಿಂಗಳ ಹಿಂದೆ ‘ಪೆಂಟಾ - ಫಸ್ಟ್’ ನೀಡಲಾಗಿದೆ; ಇಂದು ಎರಡೂವರೆ ತಿಂಗಳಿಗೆ ನಿಯಮಾನುಸಾರ ಭಾಗಮಂಡಲದಲ್ಲಿ ‘ಪೆಂಟಾ - ಸೆಕೆಂಡ್’ ಚುಚ್ಚುಮದ್ದು ನೀಡಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ; ಮೃತ ಮಗುವಿಗೆ ಚುಚ್ಚುಮದ್ದಿನಿಂದ ಯಾವದೇ ವ್ಯತಿರಿಕ್ತ ಪರಿಣಾಮ ಮೇಲ್ನೋಟಕ್ಕೆ ಕಂಡು ಬಂದಿಲ್ಲವೆಂದು ಅಭಿಪ್ರಾಯಪಟ್ಟಿರುವ ಅವರು; ತಜ್ಞ ವೈದ್ಯ ಡಾ. ಗೋಪಿನಾಥ್ ಮಾಹಿತಿ ಸಂಗ್ರಹಿಸುತ್ತಿದ್ದಾರೆ; ಅಗತ್ಯವೆನಿಸಿದರೆ ಮರಣೋತ್ತರ ಪರೀಕ್ಷೆ ವರದಿ ಗಮನಿಸಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.

ಪೋಷಕರ ಅಳಲು : ಕೋರಂಗಾಲ ಗ್ರಾಮದ ಬಳ್ಳಡ್ಕ ಈರಪ್ಪ ಹಾಗೂ ರುಕ್ಮಿಣಿ ದಂಪತಿಯ ಪುತ್ರಿ ತೇಜಸ್ವಿನಿ ಅವರನ್ನು ಮುತ್ತಾರ್ಮುಡಿಗೆ ವಿವಾಹ ಮಾಡಿಕೊಡಲಾಗಿದ್ದು; ಈ ದಂಪತಿಗೆ ಎರಡೂವರೆ ವರ್ಷದ ಮಗಳೊಂದಿಗೆ; ಇದೀಗ ಎರಡೂವರೆ ತಿಂಗಳ ಹಿಂದೆ ಜನಿಸಿರುವ ಗಂಡು ಮಗುವಿಗೆ ತವರಿನಲ್ಲಿ ತಾಯಿಯೊಂದಿಗೆ ಆರೈಕೆ ಮಾಡಲಾಗುತ್ತಿತ್ತು. ಇದೇ ತಾ. 24 ರಂದು ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ನಾಮಕರಣಕ್ಕೆ ನಿಶ್ಚಯವಾಗಿದ್ದಾಗಿ ಪೋಷಕರು ಅಳಲು ತೋಡಿಕೊಂಡಿದ್ದಾರೆ.