ಮಡಿಕೇರಿ, ಡಿ. 19: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯಿದೆಯಿಂದ ಭಾರತೀಯ ಜಾರಿಗೆ ತಂದಿದ್ದು; ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು, ಕೆಲ ಕೋಮುವಾದಿ ಸಂಘಟನೆಗಳು ಕಾಯ್ದೆಯ ಕುರಿತು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಾ ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಿವೆ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು; ಜಿಲ್ಲೆಯ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಮಂದಿಗೆ ಮಾತ್ರ ಈ ಕಾಯ್ದೆಯಿಂದ ತೊಂದರೆಯಾಗ ಬಹುದು. ಆದರೆ ವ್ಯಾಲಿಡ್ ಪಾಸ್‍ಪೋರ್ಟ್ ಮೂಲಕ ಬಂದಿರುವವರಿಗೆ, ಇಲ್ಲಿಯೆ ಹುಟ್ಟಿ ಬೆಳೆದಿರುವ ಮುಸಲ್ಮಾನರಿಗೆ ಇದರಿಂದ ಯಾವದೇ ತೊಂದರೆ ಇಲ್ಲ ಎಂದರು. ಅಷ್ಟಕ್ಕೂ ಪೌರತ್ವ ಕಾಯ್ದೆಯನ್ನು ಏಕಾಏಕಿ ಜಾರಿ ಮಾಡಿಲ್ಲ. ಅದಕ್ಕಾಗಿ ಸಮಿತಿಯೊಂದನ್ನು ರಚಿಸಿ, ಆ ಸಮಿತಿ ನೀಡಿದ (ಮೊದಲ ಪುಟದಿಂದ) ವರದಿಯನ್ವಯ ಅನುಷ್ಠಾನ ಗೊಳಿಸಲಾಗಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಈ ಕಾಯ್ದೆ ಅಗತ್ಯವಾಗಿದ್ದು; ಕೆಲ ದಿನಗಳ ಹಿಂದೆ ಮಡಿಕೇರಿಯ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ಶಾಸಕ ಹ್ಯಾರಿಸ್ ಅವರು ಕಾಯ್ದೆಯ ಕುರಿತಾಗಿ ಪ್ರಚೋದನಾಕಾರಿ ಭಾಷಣೆ ಮಾಡಿರುವದು ಸರಿಯಲ್ಲ ಎಂದು ಬೋಪಯ್ಯ ಹೇಳಿದರು.

ಸಂವಿಧಾನದ ಚೌಕಟ್ಟಿನಲ್ಲಿಯೆ ಈ ಕಾಯ್ದೆ ಅನುಷ್ಠಾನಗೊಂಡಿದ್ದು, ಈ ಬಗ್ಗೆ ಇಲ್ಲಸಲ್ಲದ ಗೊಂದಲಗಳನ್ನು ಹುಟ್ಟು ಹಾಕಿ ಸಮಾಜದಲ್ಲಿ ಶಾಂತಿ ಕದಡುವವರ ಬಗ್ಗೆ ಜನತೆ ಎಚ್ಚರ ವಹಿಸಬೇಕು. ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಕೆಜಿಬಿ ಕಿವಿಮಾತು ಹೇಳಿದರು. ಈ ಕಾಯ್ದೆಯಿಂದ ಮುಸಲ್ಮಾನರ ಯಾವದೇ ಹಕ್ಕುಗಳಿಗೆ ಚ್ಯುತಿ ಬರುವದಿಲ್ಲ ಎಂದ ಬೋಪಯ್ಯ ಬೇಡಿಕೆಗಳಿದ್ದರೆ ಸರ್ಕಾರದ ಗಮನ ಸೆಳೆಯಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದನ್ನು ಸದುಪಯೋಗಪಡಿಸಿ ಕೊಳ್ಳಿ. ಹೊರತಾಗಿ ಕಾಯ್ದೆ ಸಂಬಂಧ ದಿಕ್ಕು ತಪ್ಪಿಸುವವರ ಬಗ್ಗೆ ಜಾಗೃತೆಯಿಂದ ಇರುವಂತೆ ಸಲಹೆಯಿತ್ತರು. ಕೊಡಗಿಗೆ ಬಂದು ನೆಲೆಸಿರುವ ಅಸ್ಸಾಮಿಗಳ ದಾಖಲೆಗಳು ಈ ಕಾಯ್ದೆಯಡಿ ತನಿಖೆಗೊಳಪಡುತ್ತದೆ. ಅಕ್ರಮವಾಗಿ ದೇಶದೊಳಕ್ಕೆ ಬಂದವರಿಗೆ ಈ ಕಾಯ್ದೆಯಿಂದ ಆತಂಕ ಎದುರಾಗಲಿದೆ ಯಾದರೂ ಭಾರತೀಯ ಮುಸಲ್ಮಾನರನ್ನು ದೇಶ ಬಿಟ್ಟು ಓಡಿಸುವ ಕೆಲಸ ನಡೆಯುತ್ತದೆ ಎಂಬ ಆರೋಪದಲ್ಲಿ ಯಾವದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲು ಮಾಡುವ ಬಗ್ಗೆ ಸರ್ಕಾರ ಇದುವರೆಗೂ ಯಾವದೇ ತೀರ್ಮಾನ ಕೈಗೊಂಡಿಲ್ಲ. ಬದಲಾಯಿಸಬೇಕೆಂಬ ಬೇಡಿಕೆ ಬಂದರೆ ಸರ್ಕಾರ ಪರಿಶೀಲಿಸಿ ಮುಂದಡಿ ಇಡುತ್ತದೆ ಎಂದರು. ಕೊಡಗಿನಲ್ಲಿ ಹುಲಿ, ಕಾಡಾನೆ, ಕಾಡು ಹಂದಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಬೋಪಯ್ಯ ಅವರು ಜ. 3 ರಂದು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವದೆಂದರು. ಕಸ್ತೂರಿ ರಂಗನ್ ವರದಿ ಸಂಬಂಧ ಎನ್‍ಜಿಟಿ ಆದೇಶದ ಮೇಲೆ ಮೇಲ್ಮನವಿ ಸಲ್ಲಿಸುವ ಚಿಂತನೆ ಇದೆ ಎಂದ ಬೋಪಯ್ಯ, ಕೊಡಗಿಗೆ ಸಚಿವ ಸ್ಥಾನ ನೀಡುವ ಸಂಬಂಧ ಬಿಜೆಪಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.

ಈ ಸಂದರ್ಭಮಡಿಕೇರಿ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ತಾಲೂಕು ಬಿಜೆಪಿ ಅಧ್ಯಕ್ಷ ಕಾಂಗಿರ ಸತೀಶ್ ಇದ್ದರು.