ಮಡಿಕೇರಿ, ಡಿ.19: ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144, 144(ಎ) ಮತ್ತು ಕರ್ನಾಟಕ ಪೊಲೀಸ್ ಆಕ್ಟ್ 1963ರ ಕಲಂ 35ರಡಿ ದತ್ತವಾದ ಅಧಿಕಾರದಂತೆ ತಾ. 21 ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ಯೋಜಿತ ಮದುವೆ, ನಾಮಕರಣ, ಗೃಹಪ್ರವೇಶ ಕಾರ್ಯಕ್ರಮ ಮತ್ತು ದೇವಸ್ಥಾನ, ಪೂಜಾ ಮಂದಿರ , ಚರ್ಚ್, ಮಸೀದಿಗಳಲ್ಲಿ ನಡೆಯುವ ಪ್ರತಿ ನಿತ್ಯದ ಪ್ರಾರ್ಥನೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸಭೆ ಸಮಾರಂಭ ಮತ್ತು ಮೆರವಣಿಗೆ ನಿಷೇಧಿಸಿದೆ.
ಎಲ್ಲಾ ಸಾರ್ವಜನಿಕ, ಬಹಿರಂಗ ಸಭೆ-ಸಮಾರಂಭ, ಪ್ರಚೋದನಾಕಾರಿ ಹೇಳಿಕೆ, ಯಾವುದೇ ರೀತಿಯ ಮೆರವಣಿಗೆ, ಸಮಾವೇಶ, ಪ್ರತಿಭಟನೆ, ಜಾಥಾ, ಧರಣಿ ಮುಷ್ಕರ, ರಸ್ತೆ ರೋಕೋ, ಇತರೆ ಮುತ್ತಿಗೆ ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿüಸಿದೆ. ವಿಜಯೋತ್ಸವ , ಪ್ರತಿಭಟನೆ ನಡೆಸುವುದು, ಪಟಾಕಿ ಸಿಡಿಸುವುದು, ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸುವುದು ಮತ್ತು ಕಪ್ಪು ಅಥವಾ ಯಾವುದೇ ಪ್ರಚೋದನಾಕಾರಿ ಬಾವುಟ ಪ್ರದರ್ಶಿಸುವುದು, ಪ್ರಚೋದನಾತ್ಮಕ ಘೋಷಣೆ ಕೂಗುವುದು, ವಾಹನಗಳಲ್ಲಿ ಪ್ರಚೋದನಾತ್ಮಕ ಫಲಕ, ಬಾವುಟಗಳನ್ನು ಪ್ರದರ್ಶಿಸುವುದನ್ನು, ಯಾವುದೇ ಪ್ರತಿಕೃತಿಯನ್ನು ದಹಿಸುವುದು, ಅಣಕು ಶವಯಾತ್ರೆ ನಡೆಸುವುದನ್ನು ನಿಷೇಧಿಸಿದೆ.
ಯಾವುದೇ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧಿತ ಅವಧಿಯಲ್ಲಿ 5 ಮತ್ತು ಅದಕ್ಕಿಂತ ಮೇಲ್ಪಟ್ಟು ಜನರು ಗುಂಪು ಸೇರಬಾರದು. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್, ಎಟಿಎಂ. ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳನ್ನು ಹೊರತುಪಡಿಸಿ, ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ, ಮಾರಣಾಂತಿಕ ಹತ್ಯಾರುಗಳನ್ನು ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.