ಶ್ರೀಮಂಗಲ, ಡಿ. 19: ಶ್ರೀಮಂಗಲ ನಾಡು ಕುಮಟೂರು ಗ್ರಾಮದ ಗೋಣಿಕೊಪ್ಪ- ಕುಟ್ಟ ರಾಜ್ಯ ಹೆದ್ದಾರಿ ಅಂಚಿನಲ್ಲಿರುವ ರೈತರು ಮಾಡಿದ ಭತ್ತದ ಕೃಷಿಯನ್ನು ಕಟಾವು ಮಾಡುವ ಸಮಯದಲ್ಲಿ ಕಾಡಾನೆಗಳು, ಕಾಡೆಮ್ಮೆಗಳು ಮತ್ತು ಕಾಡು ಹಂದಿಗಳು ನಿರಂತರವಾಗಿ ನಷ್ಟ ಪಡಿಸಿರುವುದರಿಂದ ಮುಂದಿನ ಸಾಲಿನಲ್ಲಿ ಭತ್ತದ ಕೃಷಿಯನ್ನು ಮಾಡುವುದನ್ನೇ ನಿಲ್ಲಿಸಲು ರೈತರು ನಿರ್ಧರಿಸಿದ್ದಾರೆ.

ಕುಮಟೂರು ಗ್ರಾಮದ ಕೋಟ್ರಂಗಡ ಸುಬ್ರಮಣಿ ಮತ್ತು ಕೋಟ್ರಂಗಡ ಸೋಮಯ್ಯ ಅವರು ತಂದೆಯ ಕಾಲದಿಂದಲೇ ಯಾವುದೇ ವರ್ಷ ಭತ್ತದ ಗದ್ದೆಯನ್ನು ಪಾಳು ಬಿಡದೆ ಕೃಷಿ ಮಾಡುತ್ತಾ ಬಂದಿದ್ದು, ಇದೀಗ ಕಳೆದ 5 ವರ್ಷಗಳಿಂದ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದರೂ ಮತ್ತು ಇವುಗಳಿಂದ ನಿರಂತರ ನಷ್ಟವಾಗುತ್ತಿದ್ದರೂ ಸಹ ಭತ್ತದಕೃಷಿಯನ್ನು ಬಿಡದೆ ಮಾಡುತ್ತಿದ್ದರು.

ರಾಜ್ಯ ಹೆದ್ದಾರಿಯ ಒತ್ತಿನಲ್ಲಿರುವ ಭತ್ತದ ಗದ್ದೆಯಲ್ಲಿ ಆಧುನಿಕ ಬೇಸಾಯ ಪದ್ಧತಿಯಲ್ಲಿ ಮಾಡುತ್ತ ಪ್ರಗತಿಪರ ರೈತರಾಗಿರುವ ಇವರು ನಿರಂತರ ವನ್ಯಪ್ರಾಣಿಗಳ ಹಾವಳಿಯಿಂದ ಇದೀಗ ನಿರಾಸೆಗೊಂಡಿದ್ದಾರೆ. ಪ್ರಸಕ್ತ ವರ್ಷ ಭತ್ತದ ಬಿತ್ತನೆಯಾದ ದಿನದಿಂದಲೂ ಕಟಾವುಗೆ ಬರುವವರೆಗೂ ನಿರಂತರ ವನ್ಯಪ್ರಾಣಿಗಳ ಹಾವಳಿಯಿಂದ ನಷ್ಟ ಅನುಭವಿಸುತ್ತ ಬಂದಿದ್ದಾರೆ.

ಪ್ರಸಕ್ತ ವರ್ಷ ಉತ್ತಮ ಮಳೆಯಾಗಿರುವುದರಿಂದ ಉತ್ತಮವಾದ ಬೆಳೆಯೂ ಬಂದಿದೆ. ಆದರೆ, “ಕೈಗೆ ಬರುವ ತುತ್ತು ಬಾಯಿಗೆ ಬರಲಿಲ್ಲ” ಎಂಬ ಪರಿಸ್ಥಿತಿ ರೈತರಾದ ಕೋಟ್ರಂಗಡ ಸುಬ್ರಮಣಿ ಮತ್ತು ಸೋಮಯ್ಯರವರದ್ದಾಗಿದೆ. ಈ ಇಬ್ಬರು ರೈತರು ಸಹೋದರರಾಗಿದ್ದು, ಇವರ ಹತ್ತು ಎಕ್ರೆ ಭತ್ತದ ಗದ್ದೆಯಲ್ಲಿ ಅರ್ಧದಷ್ಟನ್ನು ಈಗಾಗಲೇ ಕಾಡಾನೆ ಹಿಂಡುಗಳು, ಕಾಡೆಮ್ಮೆ ಮತ್ತು ಕಾಡು ಹಂದಿಗಳು ನಿರಂತರವಾಗಿ ನುಗ್ಗಿ ನಷ್ಟ ಮಾಡಿದೆ. ದಿನ ಬಿಟ್ಟು ದಿನ ಗದ್ದೆಯಲ್ಲಿರುವ ಬೆಳೆಯ ಮೇಲೆ ವನ್ಯಪ್ರಾಣಿಗಳು ದಾಳಿ ಮಾಡುತ್ತಿರುವ ಬಗ್ಗೆ ಸುಬ್ರಮಣಿ ಹಾಗೂ ಸೋಮಯ್ಯ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.