ಮಡಿಕೇರಿ, ಡಿ. 18: ಗುತ್ತಿಗೆದಾರರಿಂದ ನಗರದಲ್ಲಿ ಅಳವಡಿಸಿರುವ ಬೀದಿ ದೀಪಗಳ ಸರಿಯಾದ ನಿರ್ವಹಣೆ ಆಗದೇ ಸಮಸ್ಯೆ ಉಂಟಾಗುತ್ತಿರುವುದೂ ಸೇರಿದಂತೆ ಮಡಿಕೇರಿಯ ವಿವಿಧ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ. ಧನಂಜಯ್, ಕಾರ್ಯದರ್ಶಿ ಸಂತೋಷ್ ಬಿ.ಎಂ. ನೇತೃತ್ವದಲ್ಲಿ ಚೇಂಬರ್‍ನ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಡಿಕೇರಿ ನಗರದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶೀಘ್ರವೇ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಮಡಿಕೇರಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಪರವಾನಗಿ ರಹಿತ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಅದೇಶಿಸಬೇಕು. ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ತಂಗುದಾಣವಿಲ್ಲದೇ ಪ್ರಯಾಣಿಕರು ತೊಂದರೆ ಗೆ ಒಳಗಾಗುತ್ತಿದ್ದು ಈ ಸ್ಥಳದಲ್ಲಿ ತಾತ್ಕಾಲಿಕ ತಂಗುದಾಣದ ವ್ಯವಸ್ಥೆ ಕಲ್ಪಿಸಬೇಕು. ಮಡಿಕೇರಿ ನಗರದಾದ್ಯಂತ ಸಂಚಾರಿ ನಿಯಮ ಪಾಲನೆಗಾಗಿ ಅಳವಡಿಸಿರುವ ನಾಮಫಲಕಗಳಲ್ಲಿ ಹಾಗೂ ನಗರದ ಮುಖ್ಯ ರಸ್ತೆ ಮತ್ತು ಪ್ರತಿ ಬಡಾವಣೆಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಅಳಸಿ ಹೋದ ಅಕ್ಷರಗಳನ್ನು ನವೀಕರಿಸಿ ಹೊಸದ್ದಾಗಿ ನಾಮಫಲಕ ಬರೆಯಬೇಕು. ನಗರದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮಳೆಗಾಲಕ್ಕೂ ಮುನ್ನ ಮುಚ್ಚಬೇಕು. ರಸ್ತೆಗಳ ಕಾಮಗಾರಿಯ ಗುಣಮಟ್ಟವನ್ನು ಖಾತರಿ ಪಡಿಸಿಕೊಂಡ ನಂತರವೇ ಗುತ್ತಿಗೆದಾರರಿಗೆ ಕಾಮಗಾರಿ ಸಂಬಂಧಿತ ಹಣ ಪಾವತಿಸಬೇಕು ಎಂದು ಮನವಿ ಮಾಡಲಾಯಿತು.

ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸಮಸ್ಯೆ ಪರಿಹರಿಸಲು ತಪ್ಪಿದಲ್ಲಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಕಾನೂನು ರೀತಿಯ ಕ್ರಮ ಕೈಗೊಳ್ಳುವುದರೊಂದಿಗೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಟ್ರೇಡ್ ಲೈಸನ್‍ಗಳನ್ನು 5 ವರ್ಷಕ್ಕೊಮ್ಮೆ ಆನ್ ಲೈನ್ ಮೂಲಕ ನವೀಕರಿಸುವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಆದೇಶ ಹೊರಡಿಸುವಂತೆಯೂ ಕೋರಲಾಯಿತು.

ಖಜಾಂಚಿ ಕಬೀರ್ ಅಹ್ಮದ್, ಸಂಘಟನಾ ಕಾರ್ಯದರ್ಶಿ ವಿನಾಯಕ್ ಎಸ್.ಎ., ಉಪಾಧ್ಯಕ್ಷ ಅರವಿಂದ್ ಕೆಂಚಟ್ಟಿ ಹಾಜರಿದ್ದರು.