ವೀರಾಜಪೇಟೆ, ಡಿ. 18: ರೈತರು ಸಾಯಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಫಸಲು ಪಡೆಯಲು ಆಧುನಿಕತೆಯ ಯೋಜನೆಯನ್ನು ರೂಪಿಸಬೇಕು. ಕೃಷಿ ವಿಜ್ಞಾನಿಗಳಿಂದ ರೈತರು ಮಾಹಿತಿ ಪಡೆದು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬೋಪಯ್ಯ ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ, ವೀರಾಜಪೇಟೆ ಕೃಷಿ ಇಲಾಖೆ ವತಿಯಿಂದ ಬೇಟೋಳಿ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವೀರಾಜಪೇಟೆ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ಕೊಡಗು ಜಿಲ್ಲೆ ಆ ಪೈಕಿ ಒಂದಾಗಿದೆ. ಕೊಡಗಿನಲ್ಲಿ ಕೃಷಿ ಹೊರತು ಪಡಿಸಿದರೆ ಬೇರೆ ಕೈಗಾರಿಕೆ, ಉದ್ಯಮ ಇತ್ಯಾದಿಗೆ ಸಾಧ್ಯವಿಲ್ಲ. ಇಲ್ಲಿಯ ರೈತರಿಗೆ ಕೃಷಿಯ ಬಗ್ಗೆ ಉತ್ತಮ ಅನುಭವ ಇದೆ, ಆದರೆ ಇಂದು ಫಸಲನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ವಿಜ್ಞಾನಿಗಳ ಜೊತೆ ಸಂವಾದದ ಆಗತ್ಯವಿದೆ ಎಂದರು.

ರೈತರು ಉತ್ತಮ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಪ್ರವೇಶದಿಂದ ರೈತರಿಗೆ ನಿರೀಕ್ಷಿತ ದರ ಸಿಗುತ್ತಿಲ್ಲ. ಆದ್ದರಿಂದ ರೈತರ ಬೆಳೆಗೆ ರೈತರೇ ದರ ನಿಗದಿ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ದಳ್ಳಾಳಿಗಳನ್ನು ದೂರವಿಟ್ಟು ಸ್ವತಃ ರೈತರೆ ದರ ನಿಗದಿ ಮಾಡಲು ಸರಕಾರ ಕಾರ್ಯಕ್ರಮ ರೂಪಿಸಲಿದೆ ಎಂದು ಬೋಪಯ್ಯ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್. ಗಾಯತ್ರಿ ವಹಿಸಿ ಮಾತನಾಡಿದರು. ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಅವರು ಕೃಷಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು.

ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯರುಗಳಾದ ಎ.ಪಿ. ಸೀತಮ್ಮ ಪ್ರಕಾಶ್, ಬಿ.ಎಂ. ಗಣೇಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಬೇಟೋಳಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಸ್ಥಳೀಯ ಸಹಾಯಕ ಕೃಷಿ ಅಧಿಕಾರಿ ಶಿವಮೂರ್ತಿ, ಆಕಾಶವಾಣಿಯ ಕೃಷಿ ವಿಭಾಗದ ನಿರೂಪಕ ವಿಜಯ ಅಂಗಡಿ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ ಶಿವ ಪ್ರಸಾದ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಡಾ. ವೀರೇಂದ್ರ ಕುಮಾರ್, ಮೈತಾಡಿ ಗ್ರಾಮದ ಪ್ರಗತಿಪರ ರೈತ ಕೆ.ಹೆಚ್. ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

ವೀರಾಜಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ಆರ್ಜಿ ಬೇಟೋಳಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಬೋಪಯ್ಯ ಉದ್ಘಾಟಿಸಿದರು.