ಮಡಿಕೇರಿ, ಡಿ. 18: ಜೀವನದಲ್ಲಿ ಸಾಧನೆ ಮಾಡಲು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೇ ಹೊರತು ಯಜಮಾನನಾಗಿ ಬೇರೆಯವರಿಗೆ ಆಜ್ಞೆ ನೀಡುವದರಿಂದ ಆಗುವುದಿಲ್ಲ. ನಾಯಕನು ಎಲ್ಲರನ್ನು ಒಗ್ಗೂಡಿಸಿ ತಾನೂ ಕೂಡ ಕೈ ಜೋಡಿಸುವುದರ ಮೂಲಕ ಕೆಲಸವನ್ನು ಮಾಡುತ್ತಾನೆ, ಆದರೆ ಯಜಮಾನನು ಆ ರೀತಿ ಇರುವುದಲ್ಲ ಎಂದು ತೂಗು ಸೇತುವೆ ನಿರ್ಮಾಣದ ಸರದಾರ ಎನಿಸಿ ಕೊಂಡಿರುವ ಸುಳ್ಯದ ಅರಂಬೂರಿನ ಪದ್ಮಶ್ರೀ ಪುರಸ್ಕøತ ಗಿರೀಶ್ ಭಾರದ್ವಾಜ್ ಅಭಿಪ್ರಾಯ ಪಟ್ಟರು.

ನಗರದ ನಿವೃತ್ತ ಪೊಲೀಸ್ ಸಿಬ್ಬಂದಿಗಳ ಕಟ್ಟಡ ಸ್ವಾಭಿಮಾನ್ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ವತಿಯಿಂದ ಏರ್ಪಡಿಸಿದ್ದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ನಾಯಕತ್ವ ಗುಣದ ಪ್ರಾಮುಖ್ಯತೆಯನ್ನು ತಿಳಿಸುತ್ತಾ ಈ ಗುಣವು ತಮ್ಮ ಜೀವನದಲ್ಲಿ ಬಹಳ ಉಪಯೋಗವಾಗಿರುವುದಾಗಿ ತಿಳಿಸಿದರು. ಈ ಸಂದರ್ಭ ಕೊಡಗಿನ ಜನರನ್ನು ಹೊಗಳುತ್ತಾ ರಾಷ್ಟ್ರಪ್ರೇಮ ಎಂಬುದು ಕೊಡಗಿನ ಜನರ ರಕ್ತದಲ್ಲಿ ಹರಿಯುತ್ತಿರುವುದಾಗಿ ಹೇಳಿದರು. ನಂತರ ನೆರೆದಿದ್ದ ಶಿಬಿರಾರ್ಥಿಗಳಿಗೆ ಸಲಹೆ ನೀಡುತ್ತಾ ವೃತ್ತಿಪರ, ಜ್ಞಾನ, ಸಾಮಥ್ರ್ಯ, ಸರಿ-ತಪ್ಪುಗಳನ್ನು ಊಹಿಸುವ ಜ್ಞಾನ, ನಿಷ್ಠೆ, ಶಿಸ್ತು ಹಾಸ್ಯ ಹಾಗೂ ಬಹುಮುಖ್ಯವಾಗಿ ಪ್ರೀತಿ , ಈ ಗುಣಗಳು ಮನುಷ್ಯನಲ್ಲಿದ್ದರೆ ಏನನ್ನು ಬೇಕಾದರೂ ಸಾಧಿಸ ಬಹುದಾಗಿ ತಿಳಿಸಿದರು. ಪರಿಸರವನ್ನು ಸ್ವಚ್ಛಗೊಳಿಸುವ ಮುನ್ನ ನಮ್ಮ ದೇಹ ಹಾಗೂ ಮನಸ್ಸನ್ನು ಸ್ವಚ್ಛಗೊಳಿಸುವುದು ಮುಖ್ಯ ಎಂದೂ ಅಭಿಪ್ರಾಯ ಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಕೆ.ಟಿ.ಕೆ ಉಲ್ಲಾಸ್ ಭಾರತದ ಶಕ್ತಿಯು ಯುವ ಪೀಳಿಗೆಯಲ್ಲಿ ಅಡಗಿದೆ, ಈ ಶಕ್ತಿಯನ್ನು ಹೊರಸೂಸಲು ನೆಹರು ಯುವ ಕೇಂದ್ರವು ಸಹಕಾರಿಯಾಗಿದೆ. ಆದ್ದರಿಂದ ಈ ಶಿಬಿರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ 3 ದಿನಗಳ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

3 ದಿನದ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಫಿಟ್ ಇಂಡಿಯಾ, ಕೌಶಲ್ಯ ಬಾರತ, ಯುವ ಚಟುವಟಿಕೆ ಹಾಗೂ ಸಾಮಾಜಿಕ ಜಾಲತಾಣ ಮತ್ತು ಯುವಜನತೆ, ಯೋಗಾಭ್ಯಾಸ, ಕಾನೂನು ಪಾಲನೆ, ಮಹಿಳಾ ಸುರಕ್ಷತೆ, ನಾಯಕತ್ವ, ರಾಷ್ಟ್ರ ನಿರ್ಮಾಣ ವಿಷಯಗಳ ಬಗ್ಗೆ ಶಿಬಿರ ನಡೆಯಲಿದೆ.

ಸಮಾರಂಭದಲ್ಲಿ ನೆಹರು ಯುವ ಕೇಂದ್ರದ ನಿಕಟ ಪೂರ್ವ ಸ್ವಯಂ ಸೇವಕ ಎಂ.ವಿ. ವಿವೇಕ್, ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ಗಣೇಶ್, ನೆಹರು ಯುವ ಕೇಂದ್ರದ ಫ್ರಾನ್ಸಿಸ್, ಮಹೇಶ್ ಹಾಗೂ ಶಿಬಿರಾರ್ಥಿಗಳು ಇದ್ದರು.