ಮಡಿಕೇರಿ, ಡಿ. 18: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ರೋಟರಿ ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಪ್ಯಾನಲ್ ವಕೀಲರಿಗೆ ತರಬೇತಿ ಕಾರ್ಯಕ್ರಮವು ತಾ. 19 ಮತ್ತು 20 ರಂದು ನಗರದ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವಿ.ವಿ. ಮಲ್ಲಾಪುರ ಅವರು ತಾ. 19 ರಂದು ಬೆಳಿಗ್ಗೆ 10.30 ಗಂಟೆಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ರೋಟರಿ ಅಧ್ಯಕ್ಷ ಕೆ.ಎಸ್. ತಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಂ ಇತರರು ಪಾಲ್ಗೊಳ್ಳಲಿದ್ದಾರೆ. ವ್ಯಕ್ತಿತ್ವ ವಿಕಸನ ಕುರಿತು ಪುತ್ತೂರಿನ ನ್ಯಾಯವಾದಿ ಸೂರ್ಯ ನಾರಾಯಣ ಮಾಹಿತಿ ನೀಡಲಿದ್ದಾರೆ. ವೃತ್ತಿ ನೈಪುಣ್ಯತೆ ಮತ್ತು ಮೌಲ್ಯಗಳ ಕುರಿತು ವಕೀಲ ಎಂ.ಎ. ನಿರಂಜನ ಅವರು ಮಾತನಾಡಲಿದ್ದಾರೆ. ಜಿಲ್ಲಾಸ್ಪತ್ರೆಯ ಮನೋವೈದ್ಯರಾದ ರೂಪೇಶ್ ಗೋಪಾಲ್ ಅವರು ಮಾನಸಿಕ ಒತ್ತಡ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಲಿದ್ದಾರೆ.

ತಾ. 20 ರಂದು ಬೆಳಿಗ್ಗೆ 10.30 ಗಂಟೆಗೆ ವಕೀಲ ಮನೋಜ್ ಬೋಪಯ್ಯ ಆಸ್ತಿಹಕ್ಕು ವಿಷಯದ ಕುರಿತು ಮಾತನಾಡಲಿದ್ದಾರೆ. ಕೆ.ಎಂ.ಮೀನಾ ಕುಮಾರಿ ಅವರು ಜೀವನಾಂಶ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ವೈದ್ಯಕೀಯ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಪ್ಯಾನಲ್ ವಕೀಲರ ಪಾತ್ರ ಕುರಿತು ಮಾತನಾಡಲಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಮಹಿಳೆಯರಿಗೆ ಇರುವ ಆಸ್ತಿ ಹಕ್ಕು ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ್ ಮಾಹಿತಿ ನೀಡಲಿದ್ದಾರೆ.