ಗೋಣಿಕೊಪ್ಪಲು, ಡಿ.18: ಕಳೆದ ನಾಲ್ಕು ವರ್ಷಗಳ ಹಿಂದೆಯೇ ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡ ಲಾಗಿದೆ. ಹೀಗಿದ್ದೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಒಣಕಸವನ್ನು ಬಿಸಾಡುವ ಛಾಳಿಯನ್ನು ಹಲವರು ಬಿಟ್ಟಿಲ್ಲ. ಇದರ ನಿಯಂತ್ರಣಕ್ಕೆ ಅಂತಹವರನ್ನು ಗುರುತಿಸಿ ದಂಡ ವಿಧಿಸುವದೇ ಉತ್ತಮ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸ ಬಿಸಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿದಲ್ಲಿ ಮಾತ್ರ ನಿಯಂತ್ರಣ ಸಾಧ್ಯ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನಯ್ಯನಕೋಟೆಯಲ್ಲಿ ಇತ್ತೀಚೆಗೆ ಗ್ರಾ.ಪಂ. ವತಿಯಿಂದ ಜರುಗಿದ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಒಣ ಕಸ ವಿಂಗಡಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವನ್ನು ಕಸಮುಕ್ತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ತಲಾ ರೂ.15 ಲಕ್ಷ ಅನುದಾನ ನೀಡಲಾಗು ತ್ತಿದೆ. ಇದರ ಸದ್ಭಳಕೆಯಾಗಬೇಕು. ಗ್ರಾಮಸ್ಥರು ಹಸಿ ತ್ಯಾಜ್ಯ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡುವಂತೆ ಜಾಗೃತಿ ಮೂಡಿಸಬೇಕಾಗಿದೆ. ಇಲ್ಲವೆ ದಂಡ ವಿಧಿಸುವ ಮೂಲಕ ಶಿಸ್ತುಕ್ರಮ ಜರುಗಿಸಬೇಕು ಎಂದರು. ಚೆನ್ನಯ್ಯನಕೋಟೆ ಗ್ರಾಮ ಕಸಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರವೂ ಅಗತ್ಯ ಎಂದು ನುಡಿದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎಚ್.ಎ.ಷಣ್ಮುಗ ಅವರು ಮಾತನಾಡಿ, ಕಸ ವಿಂಗಡಣಾ ಘಟಕ, ಕಸ ಸಂಗ್ರಹ ವಾಹನ ಖರೀದಿ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ನೀಡಲಾಗಿದೆ. ಗ್ರಾಮಸ್ಥರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಲ್ಲಿ ಉತ್ತಮ. ಕಸವನ್ನು ವಿಂಗಡಿಸಿ ನೀಡು ವಂತಾಗಬೇಕು ಎಂದು ಹೇಳಿದರು.

ಚೆನ್ನಯ್ಯನಕೋಟೆ ಗ್ರಾ.ಪಂ.ಗೆ ರೂ.15 ಲಕ್ಷದಲ್ಲಿ ಮೊದಲ ಕಂತು ರೂ.7.50 ಲಕ್ಷ ಬಿಡುಗಡೆಯಾಗಿದ್ದು, ರೂ. 4 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣ ಹಾಗೂ ರೂ.3.70 ಲಕ್ಷ ಮೊತ್ತದ ಮಹೇಂದ್ರ ಜೀತೋ ವಾಹನ ಖರೀದಿಸಲಾಗಿದೆ. ವೈಜ್ಞಾನಿಕ ಕಸ ವಿಲೇವಾರಿ ನಿಟ್ಟಿನಲ್ಲಿ ಹಲವು ಪರಿಹಾರ ಕಾರ್ಯಕ್ರಮ ಅನುಷ್ಟಾನ ಗೊಳಿಸಲಾಗುವದು ಎಂದು ಗ್ರಾ.ಪಂ. ಅಧ್ಯಕ್ಷೆ ಕೆ.ಸಿ.ಗೀತಾ ತಿಳಿಸಿದ್ದಾರೆ. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಅವರು ನೂತನ ಕಸ ಸಂಗ್ರಹ ವಾಹನವನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಮೂಕೋಂಡ ವಿಜು ಸುಬ್ರಮಣಿ, ತಾ.ಪಂ.ಸದಸ್ಯ ಕಾವೇರಮ್ಮ, ಕುಟ್ಟಂಡ ಅಜಿತ್ ಕರುಂಬಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಎನ್.ಜಿ. ಗಾಯತ್ರಿ, ಮಾಜಿ ತಾ.ಪಂ. ಅಧ್ಯಕ್ಷ ದಿನೇಶ್ ಹೆಚ್.ಕೆ., ಸದಸ್ಯರಾದ ಕಾಡ್ಯಮಾಡ ಅಯ್ಯಪ್ಪ, ಗಣೇಶ್ ಹೆಚ್.ಎಸ್., ಎಂ.ಡಿ. ಅರುಣ್‍ಕುಮಾರ್, ಕೆ.ಬಿ.ರತನ್ ಮುಂತಾದವರು ಉಪಸ್ಥಿತರಿದ್ದರು. ಗ್ರಾ.ಪಂ.ಪಿಡಿಓ ಆರ್.ರಾಜನ್ ಸ್ವಾಗತಿಸಿ, ವಂದಿಸಿದರು.