ಮಡಿಕೇರಿ, ಡಿ. 17: ಮಡಿಕೇರಿ ನಗರದ ಎಲ್ಲಾ ರಸ್ತೆಗಳ ದುರಸ್ತಿಗೆ ಶೀಘ್ರವಾಗಿ ಕ್ರಮಕೈಗೊಳ್ಳಲಾಗುವದು. ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಿರ್ದಾಕ್ಷಿಣ್ಯವಾಗಿ ಕಪ್ಪು ಪಟ್ಟಿಗೆ ಸೇರಿಸಲಾಗುವದೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಎಚ್ಚರಿಕೆ ನೀಡಿದ್ದಾರೆ.

ಸಂಪಿಗೆಕಟ್ಟೆ ರಸ್ತೆ, ಮಹದೇವಪೇಟೆ ರಸ್ತೆ, ಹಳೆಯ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆಗಳಿಗೆ ಭೇಟಿ ನೀಡಿ ರಸ್ತೆ ಮತ್ತಿತರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ ಸದ್ಯದಲ್ಲೇ 29 ಕೋಟಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುವದು. 4ಜಿ ವಿನಾಯಿತಿ ಸಿಗದ ಕಾರಣ ಸ್ಥಗಿತಗೊಂಡಿರುವ ಮಡಿಕೇರಿ ಸ್ಕ್ವೇರ್ ಕಾಮಗಾರಿಯನ್ನು ಕೂಡಲೇ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸ ಲಾಗುವದು ಎಂದರು.ಅಬ್ದುಲ್‍ಕಲಾಂ ಬಡಾವಣೆಯಲ್ಲಿ ಚರಂಡಿ ಕಾಮಗಾರಿ ಅಪೂರ್ಣ ವಾಗಿದ್ದು; ಈ ಸಂಬಂಧ ಗುತ್ತಿಗೆದಾರ ದೊರೆಸ್ವಾಮಿ ಎಂಬವರನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಶಾಸಕರು ಒಂದು ವಾರದಲ್ಲಿ ಕೆಲಸ ಪೂರ್ಣ ಗೊಳಿಸುವಂತೆ ಸೂಚಿಸಿದರು. ಮಹದೇವಪೇಟೆ, ಮಾರ್ಕೆಟ್ ರಸ್ತೆಗಳನ್ನು ಕೂಡ 15 ದಿನಗಳ ಒಳಗಾಗಿ ದುರಸ್ತಿಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.ಹಳೇ ಬಸ್ ನಿಲ್ದಾಣದಲ್ಲಿ ಬಸ್ ಶೆಲ್ಟರ್ ನಿರ್ಮಿಸಲು ಈ ಹಿಂದೆಯೇ ಸೂಚಿಸಿದ್ದರೂ (ಮೊದಲ ಪುಟದಿಂದ) ಇದುವರೆಗೂ ನಿರ್ಮಾಣವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರಂಜನ್; ಒಂದು ವಾರದೊಳಗಾಗಿ ನಗರದಲ್ಲಿ ನಡೆಯಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಿ ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು; ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಕ್ರಮಕೈಗೊಳ್ಳಲಾಗುವದೆಂದು ಆಯುಕ್ತ ರಮೇಶ್ ಅವರಿಗೆ ಎಚ್ಚರಿಕೆಯಿತ್ತರು.

ಯುಜಿಡಿ ಪೂರ್ಣಗೊಳಿಸಿ

ನಗರದ ರಸ್ತೆಗಳು ಹಾಳಾಗುವಲ್ಲಿ ಯುಜಿಡಿ ಕಾಮಗಾರಿಯೆ ಮುಖ್ಯ ಕಾರಣ ಎಂದ ರಂಜನ್ ಕೂಡಲೇ ಬಾಕಿ ಇರುವ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ನಗರಸಭೆಯಿಂದ ಮುಂದೆ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಯಾವದೇ ಕಾರಣಕ್ಕೂ ಯುಜಿಡಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸುವದಿಲ್ಲ ಎಂದು ಶಾಸಕರು; ಅಧಿಕಾರಿ ಪ್ರಸನ್ನ ಅವರಿಗೆ ಹೇಳಿದರು.