ಮಡಿಕೇರಿ, ಡಿ. 17: ಮಡಿಕೇರಿ ಕೋಟೆ ಆವರಣದಲ್ಲಿ ಇರುವ ಐತಿಹಾಸಿಕ ಅರಮನೆಯ ನವೀಕರಣ ಕಾರ್ಯವು ತಾ. 24ರಿಂದ ಆರಂಭಗೊಳ್ಳಲಿದ್ದು, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಪ್ರಥಮ ಹಂತದ ಈ ತುರ್ತು ಕಾಮಗಾರಿಗಾಗಿ ಮೊದಲ ಕಂತಿನ ಮೊತ್ತ ರೂ.53 ಲಕ್ಷವನ್ನು ಬಿಡುಗಡೆ ಮಾಡಿರುವುದಾಗಿ ಇಂದು ನ್ಯಾಯಾಲಯದ ಮುಂದೆ ಲಿಖಿತ ರೂಪದಲ್ಲಿ ಮಾಹಿತಿ ಒದಗಿಸಿದ್ದಾರೆ. ಮಡಿಕೇರಿ ಅರಮನೆಯ ದುಸ್ಥಿತಿ ಸಂಬಂಧ ಇಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ (ಮೊದಲ ಪುಟದಿಂದ) ಅಭಯ್ ಶ್ರೀನಿವಾಸ್ ಓಕ್ ಹಾಗೂ ನ್ಯಾಯಾಧೀಶರಾದ ಪ್ರದೀಪ್ ಸಿಂಗ್ ಎರೂರ್ ಅವರುಗಳನ್ನು ಒಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು. ಈ ವೇಳೆ ಕರ್ನಾಟಕ ಸರಕಾರ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ವತಿಯಿಂದ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಾ. 24ರಿಂದ ಕಾಮಗಾರಿ ಕೈಗೊಳ್ಳುವ ಬಗ್ಗೆ ಮಾಹಿತಿ ಒದಗಿಸಲಾಯಿತು. ಅಲ್ಲದೆ ರೂ. 53 ಲಕ್ಷದ ಕಾಮಗಾರಿ ಪೂರೈಸಿದ ಬಳಿಕ ಉಳಿದ ಕೆಲಸ ಮಾಡಲು ಹಂತ ಹಂತವಾಗಿ ಈಗಾಗಲೇ ಕರ್ನಾಟಕ ಸರ್ಕಾರದ ವತಿಯಿಂದ ಮಂಜೂರು ಮಾಡಲಾಗಿರುವ ರೂ. 8.20 ಕೋಟಿ ಮೊತ್ತದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯದ ಗಮನ ಸೆಳೆಯಲಾಯಿತು. ಅಲ್ಲದೆ ಅರ್ಜಿದಾರರಾಗಿರುವ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಅವರ ಪರ ವಕೀಲ ಎನ್. ರವೀಂದ್ರನಾಥ ಕಾಮತ್ ಅವರು ನ್ಯಾಯಾಲಯದ ಗಮನ ಸೆಳೆದು ಸರ್ಕಾರದ ಕಚೇರಿಗಳನ್ನು ತೆರವುಗೊಳಿಸಿರುವ ಅರಮನೆ ಆವರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ನಿರ್ದೇಶಕ ನೀಡುವಂತೆ ಕೋರಿದರು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಅರಮನೆಯ ರಕ್ಷಣೆಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿತು.