ಸೋಮವಾರಪೇಟೆಯಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ಕಥಕ್ ಮತ್ತು ಭರತನಾಟ್ಯ ವಿಭಾಗದಲ್ಲಿ ವೀರಾಜಪೇಟೆಯ ಹರ್ಷಕೀರ್ತಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದ ಹಲವಾರು ಕಡೆ ನೃತ್ಯ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿತಂದಿರುವ ಈಕೆ ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವಿದ್ವಾನ್ ಕೆ. ಟಿ. ರಾಜೇಶ್ ಆಚಾರ್ಯ ಅವರ ಬಳಿ ಸುಮಾರು 15 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

ವೀರಾಜಪೇಟೆಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಡಿ.ಎಸ್ ವ್ಯಾಸಂಗ ಮಾಡುತ್ತಿದ್ದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಭರತನಾಟ್ಯ, ಮೋಹಿನಿಆಟಂ ಹಾಗೂ ಕೂಚುಪುಡಿ ನೃತ್ಯದಲ್ಲಿ ಅಗಾಧ ಸಾಧನೆ ತೋರಿರುವ ಹರ್ಷಕೀರ್ತಿ ವೀರಾಜಪೇಟೆಯ ವಿಜಯಲಕ್ಷ್ಮೀ ಜ್ಯುವೆಲ್ಲರಿ ಮಾಲೀಕರಾದ ಎ. ಎನ್. ದಶರಥ ಹಾಗೂ ವಿಮಲ ದಶರಥ ದಂಪತಿಗಳ ಪುತ್ರಿ. ತಮ್ಮ 5ನೇ ವಯಸ್ಸಿನಿಂದಲೇ ಭರತನಾಟ್ಯ ಹಾಗೂ ಕೂಚುಪುಡಿ ಅಭ್ಯಾಸ ಆರಂಭಿಸಿದ ಈ ಬಾಲೆ, ತನ್ನ ಕಲಾಪ್ರತಿಭೆಯ ಮೂಲಕ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲೂ ಗಮನಸೆಳೆದಿದ್ದಾಳೆ. ಕಲೆಗೆ ಹೆಚ್ಚಿನ ಆಸಕ್ತಿ ತೋರಿದರೂ ಅಭ್ಯಾಸದಲ್ಲೂ ಹಿಂದೆ ಬಿದ್ದಿಲ್ಲ ಎಂಬುದು ವಿಶೇಷ.

ವೀರಾಜಪೇm,É ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ನಾಪೋಕ್ಲು ಹೀಗೆ ಜಿಲ್ಲೆಯಾದ್ಯಂತ ಅಲ್ಲದೆ ಹೊರಜಿಲ್ಲೆಗಳಾದ ಮೈಸೂರು, ಮಂಗಳೂರು, ಬೆಂಗಳೂರು ಹೀಗೆ ಎಲ್ಲೆಡೆ ಭಾಗವಹಿಸಿ ನೃತ್ಯದ ಮೂಲಕ ಗಮನಸೆಳೆದಿರುವ ಕೀರ್ತಿ, ದಸರಾ ವೇದಿಕೆ, ಗೌರಿಗಣೇಶ ಹಬ್ಬದ ವೇದಿಕೆಗಳಲ್ಲಿ, ನೃತ್ಯೋತ್ಸವಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಗಳನ್ನು, ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಹರ್ಷಕೀರ್ತಿ ಅಭ್ಯಾಸ ಮಾಡುತ್ತಿರುವ ಜಗನ್ಮೋಹನ ನಾಟ್ಯಾಲಯ ಸಂಸ್ಥೆಯು ಕಳೆದ 20 ವರ್ಷಗಳಿಂದ ಬಸವೇಶ್ವರ ದೇವಾಲಯದಲ್ಲಿ ರಾಜೇಶ್ ಆಚಾರ್ಯ ಅವರ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ನೀಡುತ್ತಾ ಬರುತ್ತಿದೆ. ಇವರು ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಹಂಪಿ ಉತ್ಸವ, ಬೇಲೂರು ಹಳೇಬೀಡು ಉತ್ಸವ, ಆನೆಗೊಂಡಿ ಉತ್ಸವ, ಮೈಸೂರು ದಸರಾ ಉತ್ಸವ ಸೋಮನಾಥಪುರ ಉತ್ಸವ ಸೇರಿದಂತೆ ರಾಜ್ಯಮಟ್ಟದ ಉತ್ಸವಗಳಲ್ಲಿ ಹಾಗೂ ಹೊರರಾಜ್ಯಗಳಲ್ಲೂ ಸಹ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಹಲವಾರು ಉತ್ತಮ ನೃತ್ಯಪಟುಗಳನ್ನು ಹೊರತಂದಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

?ಬಡಕಡ ರಜಿತಾ ಕಾರ್ಯಪ್ಪ