ಸೋಮವಾರಪೇಟೆ, ಡಿ. 17: ಗೌಡಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯೆ ಕುಸುಮಾ ಅಶ್ವಥ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಹುಟ್ಟಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳು ಟಿ.ವಿ. ಮತ್ತು ಮೊಬೈಲ್ ಫೋನ್‍ಗಳ ಕಡೆಗೆ ಆಸಕ್ತಿ ಹೆಚ್ಚಾಗುತ್ತಿದೆ. ಈ ಬಗ್ಗೆ ಪೋಷಕರು ಗಮನಹರಿಸಬೇಕು ಎಂದರು.
ಮಕ್ಕಳು ಮನೆಯಲ್ಲಿ ಬೆಳೆದ ತರಕಾರಿ, ಸೊಪ್ಪು, ಹುಳಿ ಕಾಯಿಗಳನ್ನು ಮಾರಾಟ ಮಾಡಿದರು. ಪೋಷಕರು, ಸಾರ್ವಜನಿಕರು ಸಂತೆಯಲ್ಲಿ ವಸ್ತುಗಳನ್ನು ಖರೀದಿ ಮಾಡಿದರು. ನಂತರ ವಿಜ್ಞಾನ ವಸ್ತು ಪ್ರದರ್ಶವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ತಯಾರಿಸಿದ ಶಾಲೆ ಮಾದರಿ ವಿನ್ಯಾಸ, ಸೈನ್ಯದ ಹೆಲಿಕ್ಯಾಪ್ಟರ್, ಕ್ಷಿಪಣಿಗಳು ಆಕರ್ಷಣೆಗೊಂಡವು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಗುಣೇಶ್, ಗೌಡಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಎಂ.ಡಿ.ಹರೀಶ್, ಲಕ್ಷ್ಮಿ, ಗೌಡಳ್ಳಿ ಯುವಕ ಸಂಘದ ಅಧ್ಯಕ್ಷ ರಮೇಶ್, ಶಾಲಾ ಮುಖ್ಯ ಶಿಕ್ಷಕ ಮಂಜಯ್ಯ, ಸಿ.ಆರ್.ಪಿ. ಸತೀಶ್, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ವೀರಭದ್ರಪ್ಪ, ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಉಪಸ್ಥಿತರಿದ್ದರು.