ಕುಶಾಲನಗರ, ಡಿ. 17: ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಪೂಜೋತ್ಸವದ ಅಂಗವಾಗಿ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಮಂಡಲಪೂಜೆ ಅಂಗವಾಗಿ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಶಾಸ್ತಪೂಜೆ, ಅಭಿಷೇಕ ಪೂಜೆ, ನವಕ ಹೋಮ, ಕಲಶ ಪೂಜೆ, ನೈವೇದ್ಯ ನಂತರ ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನಡೆಯಿತು. ಪಟ್ಟಣ ಸೇರಿದಂತೆ ನೆರೆಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನೆರೆದಿದ್ದ ಭಕ್ತಾದಿಗಳಿಗೆ ದೇವಸ್ಥಾನ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಪಾಲ್‍ಕೊಂಬು ಮೆರವಣಿಗೆ ನಡೆಯಿತು. ಅಲಂಕೃತ ಮಂಟಪದಲ್ಲಿ ಅಯ್ಯಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಚೆಂಡೆ ಮೇಳ, ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಲಾಯಿತು. ಅಯ್ಯಪ್ಪಸ್ವಾಮಿ ವೃತಧಾರಿಗಳು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿ ಅಯ್ಯಪ್ಪನ ಕೀರ್ತನೆಗಳನ್ನು ಭಜಿಸಿದರು.

ಈ ಸಂದರ್ಭ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಣಪತಿ, ಮಾಜಿ ಅಧ್ಯಕ್ಷ ಕೆ.ಆರ್. ಶಿವಾನಂದನ್, ಪ್ರಧಾನ ಕಾರ್ಯದರ್ಶಿ ಮಹೇಶ್ ನಾಲ್ವಡೆ, ಪಿ.ಜಿ.ಗಂಗಾಧರ್, ವ್ಯವಸ್ಥಾಪಕ ಶ್ರೀನಿವಾಸ್, ಟ್ರಸ್ಟಿಗಳು, ಆಡಳಿತ ಮಂಡಳಿ ಪ್ರಮುಖರು, ಸದಸ್ಯರು ಇದ್ದರು.