ಸೋಮವಾರಪೇಟೆ, ಡಿ. 17: ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಮುದಾಯ ಭವನದಲ್ಲಿ ನಡೆಯಿತು. ಸಂಘಕ್ಕೆ 50 ವರ್ಷಗಳು ತುಂಬುತ್ತಿದ್ದು, ಅರ್ಥಪೂರ್ಣವಾಗಿ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಚರ್ಚೆ ನಡೆಯಿತು.
ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಸಂಘವು 50 ವರ್ಷದ ಸಂಭ್ರಮದಲ್ಲಿದ್ದು ಸುವರ್ಣ ಮಹೋತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಂಘದ ವತಿಯಿಂದ ನಡೆಯುತ್ತಿರುವ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿನ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಸುಸಜ್ಜಿತ ಸಮುದಾಯ ಭವನದ ಮುಂದುವರಿದ ಕಾಮಗಾರಿಯ ಬಗ್ಗೆಯೂ ಚರ್ಚೆ ನಡೆಯಿತು. ಸಂಘದ ಅಭಿವೃದ್ಧಿಗೆ ಧನಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎನ್.ಬಿ. ಗಣಪತಿ, ಖಚಾಂಚಿ ಸಿ.ಎಸ್. ಸುರೇಶ್, ಸಮುದಾಯಭವನ ಉಸ್ತುವಾರಿ ಕಾರ್ಯದರ್ಶಿ ಕೆ.ಟಿ. ಪರಮೇಶ್, ವಿದ್ಯಾಸಂಸ್ಥೆಯ ಬಾತ್ಮೀದಾರ ಜಗದೀಶ್, ಮಾಜಿ ಸಚಿವ ಬಿ.ಎ. ಜೀವಿಜಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಸೇರಿದಂತೆ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.