ಗೃಹ ಸಚಿವ ಅಮಿತ್ ಶಾ ಸವಾಲು
ನವದೆಹಲಿ, ಡಿ. 17: ವಿಪಕ್ಷಗಳ ವಿರೋಧವಿದ್ದರೂ ಪೌರತ್ವ ಕಾಯ್ದೆ ಜಾರಿಗೆ ತಂದೆ ತರ್ತೀವಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರು ಭಾರತೀಯ ರಾಷ್ಟ್ರೀಯತೆಯನ್ನು ಪಡೆದುಕೊಳ್ಳುವುದು ಮತ್ತು ಗೌರವದಿಂದ ದೇಶದಲ್ಲಿ ವಾಸಿಸುವುದನ್ನು ಮೋದಿ ಸರ್ಕಾರ ಖಚಿತಪಡಿಸುತ್ತದೆ ಎಂದು ಪ್ರತಿಪಾದಿಸಿದರು. ಈ ಹೊಸ ಕಾನೂನಿನ ವಿರುದ್ಧವಾಗಿರುವವರು ಈ ಕಾಯ್ದೆಯನ್ನು ತಮ್ಮಿಂದ ಸಾಧ್ಯವಾದಷ್ಟು ವಿರೋಧಿಸುವಂತೆ ಸವಾಲು ಹಾಕಿದರು. ಏನೇ ಬರಲಿ, ಈ ನಿರಾಶ್ರಿತರಿಗೆ ಭಾರತೀಯ ಪೌರತ್ವ ಸಿಗುತ್ತದೆ ಮತ್ತು ಅವರು ಗೌರವದಿಂದ ಭಾರತದಲ್ಲಿ ಬದುಕುವುದು ಖಚಿತ. ಈ ವಿಚಾರದಲ್ಲಿ ಮೋದಿ ಸರ್ಕಾರ ದೃಢವಾಗಿದೆ ಎಂದರು. 2019 ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ಯಿಂದಾಗಿ ಯಾವುದೇ ಭಾರತೀಯನು ತನ್ನ ರಾಷ್ಟ್ರೀಯತೆಯನ್ನು ಕಳೆದುಕೊಳ್ಳುವುದಿಲ್ಲ. ಇನ್ನು ಮೂರು ನೆರೆಯ ರಾಷ್ಟ್ರಗಳ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಶಾಸನವನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ವಿಪಕ್ಷಗಳಿಂದ ರಾಷ್ಟ್ರಪತಿಗಳ ಭೇಟಿ
ನವದೆಹಲಿ, ಡಿ. 17: ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಜಾರಿಗೆತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಹಲವು ಕಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆ ಪ್ರತಿಪಕ್ಷಗಳ ನಿಯೋಗ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ದೂರು ನೀಡಿವೆ. ರಾಷ್ಟ್ರಪತಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಮೋದಿ ಸರ್ಕಾರ ಜನ ಒಪ್ಪಿಕೊಳ್ಳದ ಕಾನೂನನ್ನು ಜಾರಿಗೆ ತರುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು. ಸೋನಿಯಾ ಗಾಂಧಿ ನೇತೃತ್ವದ ನಿಯೋಗ ಇಂದು ಸಂಜೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಅಲ್ಲದೆ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಕುರಿತು ದೂರು ಸಹ ಸಲ್ಲಿಸಿದೆ. ಹಿರಿಯ ಕಾಂಗ್ರೆಸ್ ನಾಯಕರಾದ ಎ.ಕೆ. ಆಂಟನಿ, ಡಿಎಂಕೆ ನಾಯಕ ಟಿ.ಆರ್. ಬಾಲು ಮತ್ತು ಟಿಎಂಸಿ ನಾಯಕ ಡೆರೆಕ್ ಓ ಬ್ರಿಯಾನ್ ಅವರು ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ನಿಯೋಗದಲ್ಲಿದ್ದರು.
ದೆಹಲಿಯಲ್ಲಿ ಹಿಂಸಾಚಾರ-ಅಗ್ನಿಸ್ಪರ್ಷ
ನವದೆಹಲಿ, ಡಿ. 17: ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಜಾರಿಗೆತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈಶಾನ್ಯ ದೆಹಲಿಯ ಸೀಲಾಂಪುರ್ ಪ್ರದೇಶದಲ್ಲಿ ಶಾಲಾ ಬಸ್ ಹಾಗೂ ಸರ್ಕಾರಿ ಆಸ್ತಿ, ಪಾಸ್ತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಲಾಂಪುರ್‍ದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ಸಹ ನಡೆದಿದೆ. ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್, ನಡೆಸಿದ್ದು, ಅಶ್ರುವಾಯು ಬಳಸುವ ಮೂಲಕ ಗಲಭೆ ಹತ್ತಿಕಲ್ಲು ಮುಂದಾಗಿದ್ದಾರೆ. ಪೌರತ್ವ ಕಾಯ್ದೆ ಹಾಗೂ ಎನ್‍ಆರ್‍ಸಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು, ಪೊಲೀಸ್ ಠಾಣೆ ಹಾಗೂ ರಸ್ತೆಯಲ್ಲಿದ್ದ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ಕೈ ಮೀರಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಸೀಲಾಂಪುರದ 66 ಫೀಟ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ ಎಂದು ದೆಹಲಿ ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಭಯೋತ್ಪಾದನಾ ನಿಗ್ರಹ ಘಟಕ ಆರಂಭ
ಬೆಂಗಳೂರು, ಡಿ. 17: ಹೆದ್ದಾರಿ ಸಂಚಾರಿ ಗಸ್ತು ವಾಹನ ಹಾಗೂ ಭಯೋತ್ಪಾದನಾ ನಿಗ್ರಹ ಘಟಕ ಮತ್ತು ಸೈಬರ್, ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ತಡೆ ಕುರಿತ ಠಾಣೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗದಲ್ಲಿ ರೂ. 15 ಕೋಟಿ ವೆಚ್ಚದ 88 ಗಸ್ತು ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಬಳಿಕ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಿಇಎಸ್ (ಸೈಬರ್, ಎಕನಾಮಿಕ್ಸ್ ಮತ್ತು ನಾರ್ಕೋಟಿಕ್) ಪೊಲೀಸ್ ಠಾಣೆಗಳು ಮತ್ತು ಭಯೋತ್ಪಾದಕ ನಿಗ್ರಹ ದಳಕ್ಕೆ ಚಾಲನೆ ನೀಡಿದರು. ಬಳಿಕ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಷ್ಟ್ರದಲ್ಲೇ ಅತ್ಯಂತ ಉತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯ ಪೊಲೀಸರ ಕಾರ್ಯವೈಖರಿ ಮಾದರಿಯಾಗಿದೆ. ಬೆಂಗಳೂರಿನಲ್ಲಿ ಸೈಬರ್ ಅಪರಾಧ, ಸರಗಳ್ಳತನ, ಕೊಲೆ ಸುಲಿಗೆ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳ ನಿಗ್ರಹಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವರೂ ಕೂಡ ಅಗತ್ಯ ನೆರವು ನೀಡುತ್ತಾರೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೈಬರ್ ಕ್ರೈಂ ಮತ್ತು ಆರ್ಥಿಕ ಅಪರಾಧಗಳ ನಡುವೆ ನೇರ ಸಂಬಂಧ ಇದೆ. ನಾರ್ಕೊಟಿಕ್ ಮತ್ತು ಸೈಬರ್ ಅಪರಾಧಗಳ ನಡುವೆ ನೇರ ಸಂಪರ್ಕವಿದೆ. ಇತ್ತೀಚೆಗೆ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ವಸ್ತು ಮಾರಾಟ ಬಳಕೆ ಪ್ರಕರಣಗಳು ಹೆಚ್ಚಾಗಿವೆ. ಒಂದೊಂದು ಸೈಬರ್ ಠಾಣೆಗೆ ಹತ್ತು ಸಾವಿರಕ್ಕಿಂತ ಹೆಚ್ಚು ದೂರುಗಳು ಬಂದಾಗ ನಿರ್ವಹಣೆ ಕಷ್ಟವಾಗಿತ್ತು. ಹಾಗಾಗಿ ಬೆಂಗಳೂರಿನ 8 ಡಿಸಿಪಿ ವಿಭಾಗಗಳಲ್ಲಿ ಎಂಟು ಸೈಬರ್ ಠಾಣೆಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರಭಾಕರ ಭಟ್ ವಿರುದ್ಧ ಪ್ರಕರಣ
ಮಂಗಳೂರು, ಡಿ. 17: ತಮ್ಮ ಶಾಲೆಯಲ್ಲಿ ನಡೆದ ಕ್ರೀಡೋತ್ಸವದ ವೇಳೆ ಬಾಬರಿ ಮಸೀದಿ ಧ್ವಂಸ ಘಟನೆ ಮರುಸೃಷ್ಟಿ ಮಾಡಿದ್ದಕ್ಕಾಗಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಎಫ್‍ಐ ಕಲ್ಲಡ್ಕ ವಲಯ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್, ಶಾಲಾ ಸಂಚಾಲಕ ನಾರಾಯಣ ಸೋಮಯಾಜಿ, ವಸಂತ ಮಾಧವ, ಚೆನ್ನಪ್ಪ ಕೋಟ್ಯಾನ್ ಮತ್ತು ಶಾಲಾ ಪ್ರಾಂಶುಪಾಲರ ವಿರುದ್ಧ ದೂರು ದಾಖಲಾಗಿದೆ. ಬಂಟ್ವಾಳದಲ್ಲಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆದಿದ್ದ ಶಾಲಾ ಮಕ್ಕಳ ಕ್ರೀಡೋತ್ಸವದ ವೇಳೆ ಬಾಬರಿ ಮಸೀದಿ ಧ್ವಂಸ ಘಟನೆಯನ್ನು ವಿದ್ಯಾರ್ಥಿಗಳು ಒಂದು ಸ್ಕಿಟ್ ಮೂಲಕ ಮರುಸೃಷ್ಟಿ ಮಾಡಿದ್ದರು. ಕ್ರೀಡೋತ್ಸವದಲ್ಲಿ ಪುದುಚೇರಿ ಉಪ ರಾಜ್ಯಪಾಲೆ ಕಿರಣ್ ಬೇಡಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಎಸಿಬಿ ಐಜಿ ಚಂದ್ರಶೇಖರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಇನ್ನೂ ಹಲವು ಗಣ್ಯರು ಹಾಜರಿದ್ದು ಅವರೆಲ್ಲರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ.
ಪರ್ವೇಜ್ ಮುಷರಫ್‍ಗೆ ಗಲ್ಲು ಶಿಕ್ಷೆ
ಪೇಶಾವರ್, ಡಿ. 17: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಫರ್ವೇಜ್ ಮುಷರಫ್ ಅವರಿಗೆ ಅಲ್ಲಿನ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಧಿಕಾರಾವಧಿಯಲ್ಲಿ ಮುಷರಫ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. 2007ರ ನವೆಂಬರ್‍ನಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ಅನಗತ್ಯ ಮತ್ತು ಬಲವಂತ, ದುರುದ್ದೇಶಪೂರಿತ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದರು. 2013 ರವರೆಗೂ ಈ ಪ್ರಕರಣದ ವಿಚಾರಣೆ ನೆನೆಗುದಿಗೆ ಬಿದ್ದಿತ್ತು. ನವಾಜ್ ಷರೀಫ್ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಈ ಪ್ರಕರಣದ ವಿಚಾರಣೆಗೆ ಆದೇಶ ನೀಡಿದ್ದರು. ಬಳಿಕ ಮುಷರಫ್ ಲಂಡನ್‍ಗೆ ಪಲಾಯನ ಗೈದಿದ್ದರು. ಆದರೆ, ಕಳೆದ ಚುನಾವಣೆ ವೇಳೆಗೆ ಮತ್ತೆ ಪಾಕಿಸ್ತಾನಕ್ಕೆ ಆಗಮಿಸಿದ್ದ ಮುಷರಫ್ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮುಷರಫ್ ಮೇಲಿನ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.