ಮಡಿಕೇರಿ, ಡಿ. 16: ಈ ಹಿಂದೆ ಕ್ರೋಢದೇಶ ಎಂದು ಕರೆಯಲ್ಪಡುತ್ತಿದ್ದ ಕೊಡಗು ಜಿಲ್ಲೆಯ ಮೂಲ ನಿವಾಸಿಗಳಾಗಿರುವ ಕೊಡವ ಭಾಷಿಕ ಜನಾಂಗದವರಿಗೆ ಒಂದು ವಿಶೇಷತೆಯಿದೆ. ಮನೆಪೆದ (ಮನೆ ಹೆಸರು) ಎಂಬ ಈ ಅಪರೂಪದ ಒಂದು ವಿಶಿಷ್ಟತೆಯಿಂದ ಸಣ್ಣ ಜನಾಂಗವಾಗಿರುವ ಕೊಡವರು ಬಹುಬೇಗ ಪರಸ್ಪರ ಪರಿಚಯಸ್ತರಾಗು ತ್ತಾರೆ. ಒಂದೇ ಜಿಲ್ಲೆಯಲ್ಲಿನ ಮೂಲ ನಿವಾಸಿಗಳಾಗಿರುವ ಜನಾಂಗದವರಿಗೆ ಬಹುಶಃ ಯಾರಿಗೂ ಇಲ್ಲದಂತಹ ಒಂದು ನಿರ್ದಿಷ್ಟವಾದ ವಿಳಾಸವಿದೆ.

ಕೊಡವರು, ಕೊಡವ ಭಾಷಿಕ ಇತರ ಜನಾಂಗದವರಲ್ಲೂ ಇದು ಕಂಡುಬರುತ್ತದೆ. ಅರೆ ಭಾಷಾ ಜನಾಂಗದವರಿಗೂ ಮನೆ ಹೆಸರು ಕೊಡಗಿನಲ್ಲಿ ಕಂಡುಬರುತ್ತದೆ.

ಜಿಲ್ಲೆ, ರಾಜ್ಯ, ಅಂತರ್ರಾಜ್ಯವಲ್ಲ, ದೇಶದ ಹೊರ ಭಾಗದಲ್ಲೂ ಯಾರಾದರೂ ಅಪರಿಚಿತರಾಗಿದ್ದರೂ ಕೊಡವ ಜನಾಂಗದವರನ್ನು ಕಂಡರೆ ಪರಿಚಯ ಮಾಡಿಕೊಂಡೊಡನೆಯೇ ಅವರು ಕೊಡಗಿನಲ್ಲಿ ಎಲ್ಲಿಯವರು ಎಂದು ತಿಳಿದು ಹೋಗುತ್ತದೆ. ಪರಸ್ಪರ ಗೊತ್ತಿಲ್ಲದವರು ಇವರು ಕೊಡವ ಜನಾಂಗದವರು ಎಂದು ತಿಳಿದಲ್ಲಿ ಕೇಳುವ ಮೊದಲ ಪ್ರಶ್ನೆ... ಬಹುಶಃ ‘ನಿಂಗ ದಾಡ’ (ಯಾವ ಮನೆತನದವರು) ಎಂದು. ಈ ಬಗ್ಗೆ ತಿಳಿದ ತಕ್ಷಣವೇ ಅವರುಗಳ ಸಂಪರ್ಕ ಸೇತುವೆ, ಬಂದುಬಳಗ, ಊರು-ಕೇರಿ ಇತ್ಯಾದಿ ವಿಚಾರಗಳು ಒಂದು ಸಂಕೋಲೆಯಂತೆ ಬೆಸೆಯುತ್ತಾ ಸಾಗುತ್ತದೆ. ಇದೊಂದು ಹೆಗ್ಗುರುತು ಕೂಡ.

ಉದಾಹರಣೆಗೆ ಕೊಡಗಿನಲ್ಲಿ ಸುಮಾರು 850 ರಷ್ಟು ಕೊಡವ ಮನೆ ಹೆಸರುಗಳು ಇವೆ. ಒಂದೊಂದು ಮನೆ ಹೆಸರಿನವರು ಐನ್ ಮನೆ ಸಂಸ್ಕøತಿಗೆ ಒಳಪಟ್ಟು ಗುಂಪು-ಗುಂಪಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸಿಕೊಂಡು ಬರುತ್ತಿರುವದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ದೇಶ ತಕ್ಕರು... ಆಯಾ ಊರು-ನಾಡುಗಳಲ್ಲಿ ಊರುತಕ್ಕರು, ನಾಡುತಕ್ಕರು ಎಂಬ ವಿಶೇಷತೆ ಯೊಂದಿಗೆ ಹಲವಾರು ಮನೆ ಹೆಸರಿನ ವರಿಗೆ ಒಂದೊಂದು ನಿರ್ದಿಷ್ಟವಾದ ಜವಾಬ್ದಾರಿಯನ್ನೂ ನೀಡಿರುವದು ಮತ್ತೊಂದು ವೈಶಿಷ್ಟ್ಯವಾಗಿದೆ. ಜಿಲ್ಲೆಯಲ್ಲಿ ಹಲವು ನಾಡ್‍ಗಳು ಪರಿಗಣಿಸಲ್ಪಟ್ಟಿದ್ದು, ಕೆಲವಾರು ಮನೆತನದವರು ಒಂದೊಂದು ನಾಡ್‍ಗೆ ಒಳಪಟ್ಟಿರು ವುದು ಗಮನಾರ್ಹವಾದದ್ದು.

ಬಹುಶಃ ಇತರೆಡೆಗಳಿಗಿಂತ ಇಲ್ಲಿನವರಿಗೆ ವಿಶೇಷವಾದ ವಿಳಾಸದ ಮಹತ್ವ ಇರುವದೂ ಬೇರೆಲ್ಲೂ ಇರಲಿಕ್ಕಿಲ್ಲ. ‘ನಿಂಗ ದಾಡ’ ಎಂಬ ಪ್ರಶ್ನೆಗೆ ಉದಾಹರಣೆಗೆ ನಾನು ಕಾಯಪಂಡ ಎಂದು ಉತ್ತರಿಸಿದರೆ ಹೋ.. ಮರೆನಾಡಿನ ಬಾಡಗರ ಕೇರಿಯವರು ಎಂದು ತಟ್ಟನೆ ಗುರುತಿಸುತ್ತಾರೆ. ಅದೇ ರೀತಿ ಅಜ್ಜಮಾಡ ಎಂದರೆ ಬೀರುಗ-ಕುರ್ಚಿಯವರು, ಬಿದ್ದಾಟಂಡ, ಕಲಿಯಂಡ ಎಂದರೆ ನಾಲ್ಕುನಾಡಿನ ವ್ಯಾಪ್ತಿಯ ನಾಪೋಕ್ಲು ವಿಭಾಗದವರು. ಶಾಂತೆಯಂಡ ಎಂದರೆ ಮುಕ್ಕೋಡ್ಲು, ಕನ್ನಿಕಂಡ ಎಂದರೆ ಸೂರ್ಲಬ್ಬಿ-ಮುಟ್ಲು ಕಡೆಯವರು, ಪೋಡಮಾಡ ಎಂದರೆ ಬಾಳೆಲೆ, ಉಳ್ಳಿಯಡ, ಮಂಡೇಪಂಡ ಎಂದರೆ ಚೆಂಬೆಬೆಳ್ಳೂರು, ಪಟ್ಟಮಾಡ ಎಂದರೆ ಚೇರಂಬಾಣೆ ಈ ರೀತಿಯಾಗಿ ಸುಲಭದಲ್ಲಿ ಆಯಾ ಮನೆತನದವರನ್ನು ಗುರುತಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಸುಲಲಿತವಾದ ಸಂಪರ್ಕ ಸೇತು ಎನ್ನಬಹುದು.

ಅದಕ್ಕೂ ಮಿಗಿಲಾಗಿ ಕೆಲವು ಊರುಗಳಲ್ಲಿ ಎಂಟತ್ತು ಮನೆ ಹೆಸರಿನವರು ಮಾತ್ರ ವಾಸವಿರುತ್ತಾರೆ. ಕೊಡವರ ಹೆಸರು ಕೂಡ ನಾಣಯ್ಯ, ಕರುಂಬಯ್ಯ, ಮಾಚಯ್ಯ, ಸೋಮಯ್ಯ, ತಮ್ಮಯ್ಯ ಈ ರೀತಿಯಲ್ಲಿ ರುತ್ತದೆ. ಈ ಹಿಂದಿನಿಂದಲೂ ಅಂಚೆ ಸಂಪರ್ಕಕ್ಕೂ ಕೂಡ ಇದು ಭಾರೀ ಸುಲಭದಂತಿದೆ. ಕೇವಲ ಮನೆ ಹೆಸರಿನ ಆರಂಭದ ಅಕ್ಷರ, ಹೆಸರು, ಊರು ನಮೂದಿಸಿ ದರೆ ಅದು ಅವರಿಗೆ ತಲುಪುವದು ಖಚಿತ.

ಕೊಡವ ಜನಾಂಗದವರೊಂದಿಗೆ ಇತರ ಕೊಡವ ಭಾಷಿಕ ಜನಾಂಗ ದವರಿಗೂ ಕೂಡ ಈ ವಿಶೇಷತೆ ಕೊಡಗಿನಲ್ಲಿದೆ. ಇದರಿಂದಾಗಿ ಎಲ್ಲೇ ಪರಿಚಯವಾದರೂ ಸರಿ, ಪಟಪಟನೆ ಅವರುಗಳ ಸಂಪರ್ಕ-ಸಂಬಂಧ ಇತಿಹಾಸವೇ ತಿಳಿದು ಬರಲಿದೆ.

ವ್ಯಕ್ತಿಯ ಹೆಸರಿಗೆ ಸಂಬಂಧಿಸಿ ದಂತೆ ಸುಮಾರು 80-100 ವರ್ಷ ಗಳಿಂದ ಕೆಲವೊಂದು ಬದಲಾವಣೆ ಯಾಗಿವೆ ಎನ್ನಬಹುದು. ಈ ಹಿಂದೆ ಒಬ್ಬ ವ್ಯಕ್ತಿಗೆ ನಿರ್ದಿಷ್ಟವಾಗಿ ಬಳಸಲ್ಪಡುವ ಒಂದೇ ಹೆಸರನ್ನು ಇಡಲಾಗುತಿತ್ತು. ಉದಾಹರಣೆಗೆ ಮೊಣ್ಣಪ್ಪ, ನಾಣಯ್ಯ, ಸುಬ್ಬಯ್ಯ ಈ ರೀತಿಯಾಗಿ ಮಾತ್ರ ಹೆಸರು ಇರುತ್ತಿತ್ತು. ಇದಕ್ಕೆ ಕ್ರಮೇಣ ‘ಪೆಟ್‍ನೇಮ್’ ಎಂಬಂತೆ ಮತ್ತೊಂದು ಹೆಸರು ಸೇರ್ಪಡೆಯಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಅರುಣ್ ಮಾಚಯ್ಯ, ಕಂದಾ ಭೀಮಯ್ಯ, ರತನ್ ಕುಟ್ಟಯ್ಯ ಈ ರೀತಿ ಕಂಡುಬರುತ್ತದೆ. ಇದು ಒಂದು ರೀತಿಯಲ್ಲಿ ಆಧುನೀಕತೆಯ ಪ್ರಭಾವದಿಂದ ಇರಬಹುದು ಎನ್ನಬಹುದಾಗಿದೆ. ಮತ್ತೊಂದು ರೀತಿಯಲ್ಲಿ ಒಂದು ಕುಟುಂಬದಲ್ಲಿ ಒಂದೇ ಹೆಸರು ಹೊಂದಿರುವ ಹಲವರು ಇರುವದರಿಂದ ಪ್ರತ್ಯೇಕವಾಗಿ ಸುಲಭ ರೀತಿಯಲ್ಲಿ ಅವರನ್ನು ಗುರುತಿಸಲು ಈ ರೀತಿಯಾಗಿ ಪೆಟ್ ನೇಮ್ (ಕೊದಿಪೆದ) ಹೆಸರು ಬಳಕೆಗೆ ಬಂದಿದೆ ಎಂದೂ ಹೇಳಬಹುದಾಗಿದೆ ಎನ್ನುತ್ತಾರೆ ಹಲವರು. ಪುರುಷರು ಮಾತ್ರವಲ್ಲದೆ ಮಹಿಳೆಯರಿಗೂ ವಿಶೇಷ ಹೆಸರು ಈ ಮೂಲ ನಿವಾಸಿಗಳಲ್ಲಿದೆ. (ಪೊನ್ನಮ್ಮ, ಸೀತಮ್ಮ, ಚೋಂದಮ್ಮ, ಕಾವೇರಮ್ಮ ಇತ್ಯಾದಿ..) ಇದರಲ್ಲೂ ಈ ಹೆಸರಿನ ಮುಂದೆ ಪ್ರಸ್ತುತ ಪೆಟ್‍ನೇಮ್ ಬಳಕೆಯಾಗುತ್ತಿದೆ. ಶೈಕ್ಷಣಿಕ ಬದಲಾವಣೆ, ಆಧುನೀಕರಣ, ನಗರೀಕರಣದ ಬದುಕು ಇದಕ್ಕೆ ಪ್ರೇರಣೆಯಾಗಿರಬಹುದು ಎಂಬದು ಇನ್ನೊಂದು ಅಂಶ.

ಆದರೆ ಇಂದು ಏನಾಗುತ್ತಿದೆ...?

ಇಂತಹ ಒಂದು ಐತಿಹಾಸಿಕ ವಾದ ಮಹತ್ವಪೂರ್ಣ ಅವಕಾಶ ಹೊಂದಿರುವ ಜನಾಂಗದಲ್ಲಿ ಪ್ರಸ್ತುತ ಇದು ಮೆಲ್ಲಮೆಲ್ಲನೆ ಮರೆಯಾಗುತ್ತಿದೆ. ಈ ಹಿಂದಿನಿಂದಲೂ ಇಲ್ಲಿನವರಿಗೆ ವಿಳಾಸಕ್ಕೆ ಡೋರ್ ನಂಬರ್, ಇಂತಹ ಸ್ಟ್ರೀಟ್, ಇಷ್ಟನೇ ಅಡ್ಡ ರಸ್ತೆ ಎಂಬಿತ್ಯಾದಿ ಅಂಶಗಳು ಬೇಕಿರಲಿಲ್ಲ. ಆದರೆ ಇದೀಗ ಆಸ್ತಿ-ಪಾಸ್ತಿಗಳ ಮಾರಾಟ, ಊರು ಬಿಟ್ಟು ನಗರಗಳತ್ತ ಜನರು ಮುಖ ಮಾಡುತ್ತಿರುವದ ರಿಂದ ನಿರ್ದಿಷ್ಟ ‘ಅಡ್ರೆಸ್’ ಹೊಂದಿದ್ದ ಜನಾಂಗದ ಈ ವಿಶಿಷ್ಟತೆ ಮರೆ ಯಾಗುತ್ತಾ ಬರುತ್ತಿದೆ. ಹಿರಿಯ ರೊಬ್ಬರು ಹೇಳುವಂತೆ ಈ ರೀತಿಯ ವಿಶೇಷತೆಯ ಅಡ್ರೆಸ್ ಇರುವ ಜನಾಂಗ ತಮ್ಮ ‘ಅಡ್ರೆಸ್’ ಕಳೆದು ಕೊಳ್ಳುತ್ತಿರುವ ವಿಷಾದಕರ ಸಂಗತಿ ಇದು ಎನ್ನಬಹುದೇನೋ. ಈಗಿನ ಯುವ ಪೀಳಿಗೆಯಲ್ಲಿ ಒಂದಷ್ಟು ಒಗ್ಗಟ್ಟು-ಹುಟ್ಟಿದ ಮಣ್ಣಿನ ಮೇಲೆ ಪ್ರೀತಿಯ-ಮಮಕಾರದ ಸೆಳೆತ ಕಂಡುಬರುತ್ತಿದೆ. ಇದು ಇನ್ನಷ್ಟು ಗಟ್ಟಿಯಾದಲ್ಲಿ ಮಾತ್ರ ಈ ಹಿಂದಿನ ವಿಶಿಷ್ಟತೆ ಉಳಿಸಬಹುದು.

-ಕಾಯಪಂಡ ಶಶಿ ಸೋಮಯ್ಯ