ಸೋಮವಾರಪೇಟೆ, ಡಿ. 17: ಕಳೆದ ಹಲವು ದಶಕಗಳಿಂದ ಗೃಹರಕ್ಷಕ ದಳದವರು ಬಳಕೆ ಮಾಡಿಕೊಳ್ಳುತ್ತಿದ್ದ ಕಟ್ಟಡವನ್ನು ಕೃಷಿ ಇಲಾಖೆಯ ಸೂಚನೆ ಮೇರೆಗೆ ಏಕಾಏಕಿ ಒಡೆದು ಹಾಕುತ್ತಿರುವದರ ವಿರುದ್ಧ ಗೃಹರಕ್ಷಕ ದಳದ ಘಟಕಾಧಿಕಾರಿ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿದ್ದಾರೆ.
ಇಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಗೆ ಒತ್ತಿಕೊಂಡಂತೆ ಇರುವ ಸ.ನಂ. 190/1ಎಪಿ1ರಲ್ಲಿನ 4 ಸೆಂಟ್ ಜಾಗದಲ್ಲಿರುವ ಕಟ್ಟಡವನ್ನು ಕಳೆದ 1993 ರಿಂದಲೂ ಹೋಂ ಗಾರ್ಡ್ಗಳು ತಮ್ಮ ಕಚೇರಿಯನ್ನಾಗಿ ಬಳಕೆ ಮಾಡಿಕೊಂಡಿದ್ದು, ಕವಾಯತು ಸೇರಿದಂತೆ ಇನ್ನಿತರ ಕೆಲಸಗಳಿಗೆ ಬಳಕೆಯಾಗುತ್ತಿದೆ. ಆದರೆ ಇದೀಗ ಕೃಷಿ ಇಲಾಖೆಯವರು ಕಟ್ಟಡ ತಮಗೆ ಸೇರಿದ್ದು ಎಂದು ಹಕ್ಕು ಚಲಾಯಿಸುತ್ತಿದ್ದು, ಕಟ್ಟಡವನ್ನು ಒಡೆಯುತ್ತಿದ್ದಾರೆ. ತಕ್ಷಣ ತಾವುಗಳು ಮಧ್ಯೆ ಪ್ರವೇಶಿಸುವಂತೆ ಜಿಲ್ಲಾಧಿಕಾರಿಗೆ ಬರೆದಿರುವ ದೂರಿನಲ್ಲಿ ಘಟಕಾಧಿಕಾರಿ ರುದ್ರಪ್ಪ ಮನವಿ ಮಾಡಿದ್ದಾರೆ.
ನೂತನವಾಗಿ ರೈತ ಸಂಪರ್ಕ ಕೇಂದ್ರ ನಿರ್ಮಿಸಲು ಸರ್ಕಾರದಿಂದ ರೂ. 50 ಲಕ್ಷ ಬಿಡುಗಡೆಯಾಗಿದ್ದು, ರೈತ ಸಂಪರ್ಕ ಕೇಂದ್ರಕ್ಕಾಗಿ ನಮ್ಮ ಕಚೇರಿಯ ನಿವೇಶನವನ್ನು ಬಳಸಿ ಕೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸ.ನಂ. 190/1.5 ರಲ್ಲಿ ಕೃಷಿ ಇಲಾಖೆಗೆ 10 ಸೆಂಟ್ ಜಾಗ ಮಂಜೂರು ಮಾಡಿದ್ದಾರೆ. ಆದರೆ ಕೃಷಿ ಇಲಾಖೆಯವರು 190/1ಎಪಿ1ರಲ್ಲಿನ 4 ಸೆಂಟ್ ಜಾಗವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರುದ್ರಪ್ಪ ದೂರಿದ್ದಾರೆ. ಕಟ್ಟಡದ ಛಾವಣಿಯನ್ನು ಕೆಡವಿರುವ ಬಗ್ಗೆ ಈಗಾಗಲೇ ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್, ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ಸರ್ಕಾರದಿಂದ ರೂ. 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿಗಳು 10 ಸೆಂಟ್ ನಿವೇಶನವನ್ನು ಇಲಾಖೆಗೆ ಒದಗಿಸಿದ್ದಾರೆ. ಅದೇ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.