ಕೂಡಿಗೆ, ಡಿ. 17: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೂಡಿಗೆಯ ಕಾರ್ಪೋರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಕೊಡಗು ಜಿಲ್ಲೆಯ 18 ರಿಂದ 45 ವರ್ಷದೊಳಗಿನ ಪರಿಶಿಷ್ಟ ವರ್ಗಗಳ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತಾ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಕೂಡಿಗೆಯಲ್ಲಿ ಆರಂಭವಾದ ಸ್ವ-ಉದ್ಯೋಗ ತರಬೇತಿ ಶಿಬಿರವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಿರುದ್ಯೋಗಿ ಯುವಕ- ಯುವತಿ ಯರು ತರಬೇತಿ ಪಡೆದು ಸ್ವ-ಉದ್ಯೋಗನ್ನು ಆರಂಭಿಸಿ ತಮ್ಮ ಜೀವನ ಮಟ್ಟವನ್ನು ಸುಧಾರಿಸಿ ಕೊಳ್ಳಬೇಕು. ಸ್ವ-ಉದ್ಯೋಗದ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ನಂತರ ಈ ಸಂಸ್ಥೆಯ ಸಹಕಾರದಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಪಡೆದು ಸ್ವ-ಉದ್ಯೋಗಿಗಳಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಜಿಲ್ಲಾ ಗಿರಿಜನ ಸಮನ್ವಯಾಧಿಕಾರಿ ಶಿವಕುಮಾರ್ ಮಾತನಾಡಿ ಪರಿಶಿಷ್ಟ ವರ್ಗಗಳ ಜನರು ಹಾಡಿಗಳಲ್ಲಿ ವಾಸವಿದ್ದು, ಅವರುಗಳು ಸಮಾಜದಲ್ಲಿ ಸ್ವಾವಲಂಭಿಗಳಾಗಿ ಬದುಕಲು ಉದ್ಯೋಗ ಮುಖ್ಯವಾಗಿದೆ. ಅದಕ್ಕೆ ಪೂರಕವಾಗುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆಯ ವತಿಯಿಂದ ಗಿರಿಜನರಿಗೆ ಸ್ವ-ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದೆ ಎಂದರು. ಕಾರ್ಪೋರೇಷನ್ ಬ್ಯಾಂಕಿನ ಹಿರಿಯ ಅಧಿಕಾರಿ ಮಂಜುನಾಥ್ ಮಾತನಾಡಿ, ಕಾರ್ಪೋರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಉದ್ಯಮಾಶೀಲತ ತರಬೇತಿಗಳನ್ನು ನೀಡುತ್ತಾ ಬಂದಿದೆ. ಹೈನುಗಾರಿಕೆ, ಕಂಪ್ಯೂಟರ್ ಬೇಸಿಕ್, ಡಿಟಿಪಿ, ಗೃಹೋಪಯೋಗಿ ವಸ್ತುಗಳ ತಯಾರಿಕೆ, ಬ್ಯೂಟಿಪಾರ್ಲರ್ ತರಬೇತಿ, ಹೊಲಿಗೆ ತರಬೇತಿ, ಬೇಕರಿ ತಿಂಡಿಗಳ ತಯಾರಿಕೆ, ಎಂಬ್ರಾಯಡರಿ ಮತ್ತು ಫ್ಯಾಬ್ರಿಕ್ ಪೇಂಟಿಂಗ್, ನರ್ಸರಿ ನಿರ್ವಹಣೆ, ಪೇಪರ್ ಕವರ್, ಚೀಲ, ಫೈಲ್ ತಯಾರಿಕೆ, ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಸೇರಿದಂತೆ ಮತ್ತಿತರ ತರಬೇತಿಗಳನ್ನು ವಸತಿ ಸೌಲಭ್ಯ ದೊಂದಿಗೆ ನೀಡಲಾಗುವುದು ಎಂದರು. ಈ ಸಂದರ್ಭ ಸೋಮವಾರಪೇಟೆ ಗಿರಿಜನ ಅಭಿವೃದ್ಧಿ ಅಧಿಕಾರಿ ಶೇಖರ್, ವೀರಾಜಪೇಟೆ ಗಿರಿಜನ ಅಭಿವೃದ್ಧಿ ಅಧಿಕಾರಿ ಗುರುಸ್ವಾಮಿ, ಇಲಾಖೆಯ ರಜನಿಕಾಂತ್, ಆನಂದ್, ರವಿ, ಮಂಜುಳಾ, ಜಗದೀಶ್ ಹಾಗೂ ಕೂಡಿಗೆಯ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಮೇಲ್ವಿಚಾರಕರಾದ ಸಲಾವುದ್ದೀನ್ ಸೇರಿದಂತೆ ಮತ್ತಿತರರು ಇದ್ದರು.