ವೀರಾಜಪೇm,É ಡಿ.15: ಕಳೆದ ಮೂರು ವರ್ಷಗಳಿಂದ ವೀರಾಜಪೇಟೆ ಯಲ್ಲಿ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್‍ಗೆ ಕಾಯಕಲ್ಪ ದೊರೆತಿದ್ದು ತಾ:18ರಂದು ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ.

ವಿಧಾನಸಭಾ ಚುನಾವಣೆಗೂ ಮೊದಲು ರಾಜ್ಯದ ಎಲ್ಲಾ ಜಿಲ್ಲೆಗಳು ತಾಲೂಕುಗಳ ಪ್ರಮುಖ ಕೇಂದ್ರಗಳಿಗೆ ಮಂಜೂರಾಗಿದ್ದ ಇಂದಿರಾ ಕ್ಯಾಂಟಿನ್ ವೀರಾಜಪೇಟೆಗೂ ಮಂಜೂರಾಗಿತ್ತು. ಆದರೆ ಕ್ಯಾಂಟಿನ್‍ಗೆ ಸೂಕ್ತ ಜಾಗದ ಆಯ್ಕೆಗೆ ಸುಮಾರು ಎಂಟು ತಿಂಗಳ ಕಾಲಾವಕಾಶ ಬೇಕಾಯಿತು.

ವೀರಾಜಪೇಟೆ ಗೋಣಿಕೊಪ್ಪಲು ರಸ್ತೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ಸಾರಿಗೆ ಸಂಸ್ಥೆಗೆ ಸೇರಿದ ಖಾಲಿ ಜಾಗದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಜಾಗ ಗೊತ್ತು ಪಡಿಸಲಾದರೂ ಸಾರಿಗೆ ಸಂಸ್ಥೆಯ ಪುತ್ತೂರು ಉಪ ವಿಭಾಗದ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ಜಾಗ ಹಸ್ತಾಂತರಕ್ಕೆ ಹಾಗೂ ಅದೇ ಜಾಗದಲ್ಲಿದ್ದ ಭಾರೀ ಮರವೊಂದನ್ನು ಕೆಡವಲು ವಿವಾದದಿಂದ ಮತ್ತಷ್ಟು ವಿಳಂಬವಾಯಿತು. ಆಗಿನ ಜಿಲ್ಲಾಧಿಕಾರಿಯವರ ಮಧ್ಯಸ್ಥಿಕೆಯಿಂದ ಜಾಗ ತೆರವು ಮಾಡಲಿದ್ದ ಎಲ್ಲ ಅಡೆ ತಡೆಗಳು ಅಂತಿಮಗೊಂಡ ನಂತರ 2018 ರ ಏಪ್ರಿಲ್ ತಿಂಗಳಲ್ಲಿ ಆಗಿನ ಉಸ್ತುವಾರಿ ಸಚಿವ ಸೀತಾರಾಂ ಅವರಿಂದ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

2019ರ ಡಿಸೆಂಬರ್ ಮೊದಲ ವಾರದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡದ ಕಾಮಗಾರಿ ಪೂರ್ಣಗೊಂಡ ಬಳಿಕ ಈಗ ಪ್ರಾರಂಭೋತ್ಸವ ನಡೆಯಲಿದೆ.

ಸುಮಾರು ರೂ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ ತಾ:18ರಂದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದ್ದು; ಈ ಕ್ಯಾಂಟಿನ್‍ನಲ್ಲಿ ಊಟಕ್ಕೆ ರೂ 10 ಬೆಳಗಿನ ಉಪಹಾರಕ್ಕೆ ರೂ. 5 ನಿಗದಿಪಡಿಸಲಾಗಿದೆ. ತಾ.18ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಈ ಕ್ಯಾಂಟಿನ್‍ನ್ನು ಉದ್ಘಾಟಿಸಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಕ್ಯಾಂಟೀನ್ ನಡೆಸುವ ಗುತ್ತಿಗೆದಾರರು ರಿಯಾಯಿತಿ ದರದಲ್ಲಿ ಆಹಾರ ಪೊರೈಸುವುದರೊಂದಿಗೆ ಕ್ಯಾಂಟಿನ್‍ನಲ್ಲಿ ತಯಾರಿಸುವ ಪ್ರತಿ ದಿನದ ಮೆನುವನ್ನು ಕ್ಯಾಂಟಿನ್‍ನ ಮುಂಭಾಗ ಫಲಕದಲ್ಲಿ ಪ್ರಕಟಿಸಲು ಸೂಚನೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿಯ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ತಿಳಿಸಿದ್ದಾರೆ.