ಕುಶಾಲನಗರ, ಡಿ 15: ಕುಶಾಲನಗರ ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಮಾರುಕಟ್ಟೆ ರಸ್ತೆ ಗಾಯತ್ರಿ ಸಭಾಂಗಣದಲ್ಲಿ ನಡೆಯಿತು. ಮಡಿಕೇರಿಯ ನ್ಯಾಯವಾದಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಅವರು ರಾಷ್ಟ್ರ ಮತ್ತು ಧರ್ಮದ ವಿಷಯದ ಕುರಿತು ಮಾತನಾಡಿದರು. ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರಿದೆ. ಧರ್ಮದ ಬಗ್ಗೆ ಭಾಷಣ ಮಾಡಿದರೆ ಅದನ್ನು ತಿರುಚಿ ಅವರ ಮೇಲೆ ರಾತ್ರೋರಾತ್ರಿ ಮೊಕದ್ದಮೆ ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಎಂದರು. ನಮ್ಮಲ್ಲಿ ಒಗ್ಗಟ್ಟು ಮೂಡಬೇಕಿದೆ. ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ವ್ಯವಸ್ಥಿತ ಕಾರ್ಯಗಳನ್ನು ಹತ್ತಿಕ್ಕಬೇಕಿದೆ. ಹಿಂದೂ ಎಂದರೆ ನಮ್ಮ ಜೀವನ ಕ್ರಮ, ನಮ್ಮ ಧರ್ಮ ಎಂದರೆ ಅದು ಸನಾತನ ಧರ್ಮ ಎಂಬುದನ್ನು ಅರಿಯಬೇಕಿದೆ ಎಂದು ಕೃಷ್ಣಮೂರ್ತಿ ತಿಳಿಸಿದರು.

ಸಮಿತಿಯ ಪ್ರಮುಖರಾದ ಧರ್ಮ ಪ್ರಚಾರಕರಾದ ಕುಶಾಲನಗರದ ದೀಪಾ ತಿಲಕ್ ಧರ್ಮಾಚರಣೆ ಮತ್ತು ಧರ್ಮರಕ್ಷಣೆ ಕುರಿತು ಮಾತನಾಡಿದರು. ಪಾಶ್ಚಿಮಾತ್ಯರ ಅನುಕರಣೆ ಹೆಚ್ಚುತ್ತಿರುವ ಕಾರಣ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಕುಂಠಿತಗೊಳ್ಳುತ್ತಿದೆ. ಯುವಪೀಳಿಗೆ ವೀರ ಸೇನಾನಿಗಳನ್ನು ಆದರ್ಶರಾಗಿ ಕಾಣಬೇಕಿದೆ. ಭಾರತದ ಶ್ರೀಮಂತ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಯುವಪೀಳಿಗೆಗೆ ಹೆಚ್ಚಾಗಿ ಅರಿವು ಮೂಡಿಸಬೇಕಿದೆ ಎಂದು ಅವರು ಕರೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಮೈಸೂರಿನ ಶಿವರಾಂ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಘವೇಂದ್ರ ಭಟ್, ಸುಬ್ರಮಣ್ಯ ಭಟ್ ಅವರಿಂದ ವೇದಮಂತ್ರ ಘೋಷ ಕಾರ್ಯ ನಡೆಯಿತು.

ಸಮಿತಿ ಪ್ರಮುಖರಾದ, ಬಿಎಂ ರವಿಚಂದ್ರ, ಸುಮನ್, ಲಕ್ಷ್ಮಿಕುಮಾರ್, ತಿಲಕ್, ಲಕ್ಷ್ಮಿ ರವಿಚಂದ್ರ, ಪಪಂ ಸದಸ್ಯ ಅಮೃತ್‍ರಾಜ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು, ಹಿಂದು ಬಾಂಧವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಾಸ್ತು ಶುದ್ದಿ ಮಾಡುವ ಸನಾತನ ಸಾತ್ವಿಕ ಉತ್ಪಾದನೆಗಳು, ಸನಾತನದ ಗ್ರಂಥ ಸಂಪತ್ತು, ಸನಾತನ ಪ್ರಭಾತಗಳ ಪ್ರದರ್ಶನ ಮತ್ತು ಮಾರಾಟ, ಹಿಂದೂಗಳ ಆಚರಣೆ, ಪದ್ದತಿ, ಕುಂಕುಮಧಾರಣೆ, ಔಷಧಿ ಗುಣಗಳ ಗಿಡಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಮುಸ್ಲಿಂ ಒಕ್ಕೂಟದ ಕೆಲವು ಮಂದಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣ ಆವರಣದಲ್ಲಿ ಡಿವೈಎಸ್ಪಿ ಪಿ.ಕೆ.ಮುರಳೀಧರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮುಖಂಡರ ಸಭೆ

ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ಹಿಂದೂ ರಾಷ್ಟ್ರ ಜಾಗೃತಿ ಕಾರ್ಯಕ್ರಮಕ್ಕೆ ಮುಸ್ಲಿಂ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಹಮ್ಮಿಕೊಳ್ಳವ ಹೇಳಿಕೆ ನೀಡಿದ ಬೆನ್ನಲ್ಲೇ ಪೊಲೀಸ್ ಠಾಣಾ ಅಧಿಕಾರಿಗಳು ಎರಡೂ ಧರ್ಮದ ಮುಖಂಡರನ್ನು ಕರೆಸಿ ಸಭೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಪ್ರಭಾರ ವೃತ್ತ ನಿರೀಕ್ಷಕ ಮಹೇಶ್ ಅವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸದಂತೆ ಸೂಚನೆ ನೀಡಿದರು. ಧರ್ಮ ಜಾಗೃತಿ ಸಭೆ ಸಾರ್ವಜನಿಕವಾಗಿ ಹಮ್ಮಿಕೊಂಡಿಲ್ಲವಾದ ಕಾರಣ ವಿನಾಕಾರಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು. ಇದೇ ವೇಳೆ ಕಾರ್ಯಕ್ರಮದ ಬಗ್ಗೆ ಬಹಿರಂಗ ಪ್ರಚಾರ ಕಾರ್ಯ ಸ್ಥಗಿತಗೊಳಿಸುವಂತೆ ಹಿಂದೂ ಮುಖಂಡರಿಗೆ ಸೂಚನೆ ನೀಡಿ ಕಳುಹಿಸಿದರು.