ಮರಗೋಡು, ಡಿ. 15: ವೈಷ್ಣವಿ ಫುಟ್ಬಾಲ್ ಕ್ಲಬ್ ಮತ್ತು ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆತಿಥೇಯ ವೈಷ್ಣವಿ ಫುಟ್ಬಾಲ್ ಕ್ಲಬ್ ಸೆಮಿಫೈನಲ್ ಪ್ರವೇಶಿಸಿದೆ. ಮರಗೋಡು ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿರುವ ಪಂದ್ಯಾವಳಿಯ ಮೂರನೇ ದಿನದಾಟದಲ್ಲಿ ನಾಲ್ಕು ತಂಡಗಳು ಉಪಾಂತ್ಯಕ್ಕೆ ಲಗ್ಗೆ ಇಟ್ಟಿವೆ.

ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ವೈಷ್ಣವಿ ತಂಡ ಕಾಫಿ ಲವರ್ಸ್ ಚೆಟ್ಟಳ್ಳಿ ತಂಡವನ್ನು 2-0 ಗೋಲುಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಎರಡನೇ ಪಂದ್ಯದಲ್ಲಿ ಮೈಸೂರಿನ ವಿಜಯ ನಗರ ಎಫ್ಸಿ ತಂಡ ಕಟ್ಟೆಮಾಡುವಿನ ಮಧು ಫ್ರೆಂಡ್ಸ್ ತಂಡವನ್ನು ಏಕಪಕ್ಷೀಯ ಹೋರಾಟದಲ್ಲಿ 4-0 ಗೋಲುಗಳಿಂದ ಮಣಿಸಿತು. ಮೂರನೇ ಪಂದ್ಯದಲ್ಲಿ ಕೂರ್ಗ್ ಸಾಕರ್ ಕ್ಲಬ್ ತಂಡ ಪಿರಿಯಾಪಟ್ಟಣದ ಗೋಲ್ಡನ್ ಸ್ಟ್ರೈಕಲರ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ನಾಲ್ಕನೇ ಪಂದ್ಯದಲ್ಲಿ ಸಿವೈಸಿ ಒಂಟಿಯಂಗಡಿ ತಂಡ ಅಲ್ ಶಿಬಾಬ್ ಮಟ್ಟನೂರು ತಂಡವನ್ನು ರೋಚಕ ಹೋರಾಟದಲ್ಲಿ 3-2 ಗೋಲುಗಳಿಂದ ಮಣಿಸಿ ಮೂರನೇ ಹಂತಕ್ಕೆ ಲಗ್ಗೆ ಇಟ್ಟಿತು

ಬಿವೈಸಿ ಹಾಲುಗುಂದ ಹಾಗೂ ಯೂನಿವಸ್ರ್ಲ್ ಎಫ್ಸಿ ರಂಗಸಮುದ್ರ ಮಧ್ಯೆ ನಡೆದ ಪಂದ್ಯ ಏಕಪಕ್ಷೀಯವಾಗಿದ್ದು ಹಾಲುಗುಂದ ತಂಡ 4-0 ಗೋಲುಗಳಿಂದ ಜಯದ ನಗೆ ಬೀರಿತು.

ಮಿಲನ್ಸ್ ಅಮ್ಮತ್ತಿ ಮತ್ತು ರಾಯಲ್ಸ್ ಕುಕನೂರು ತಂಡದ ಮಧ್ಯೆ ನಡೆದ ಆರನೇ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಕೊನೆಗೆ ಪೆನಾಲ್ಟಿ ಶೂಟೌಟ್ನಲ್ಲಿ ಅಮ್ಮತ್ತಿ ತಂಡ 4-3 ಗೋಲುಗಳಿಂದ ಕುಕನೂರು ತಂಡಕ್ಕೆ ಸೋಲಿನ ಆಘಾತ ನೀಡಿತು.

ಏಳನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನೆಹರೂ ಎಫ್ಸಿ ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಟ ಸಿವೈಸಿ ತಂಡವನ್ನು 1-0 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.

ದಿನದ ಎಂಟನೇ ಪಂದ್ಯದಲ್ಲಿ ವಿಜಯ ನಗರ ಎಫ್ಸಿ ಮೈಸೂರು ತಂಡ ಕೂರ್ಗ್ ಸಾಕರ್ ಕ್ಲಬ್ ತಂಡವನ್ನು 4-0 ಗೋಲುಗಳಿಂದ ಮಣಿಸಿ ಜಯದ ನಾಗಾಲೋಟ ಮುಂದುವರಿಸಿದೆ. ಈ ಮೂಲಕ ಸೆಮಿಫೈನಲ್ ಹಂತ ಪ್ರವೇಶಿಸಿ ಪ್ರಶಸ್ತಿ ಕನಸು ಜೀವಂತವಾಗಿಟ್ಟುಕೊಂಡಿತು.

ಕೊನೆಯ ಪಂದ್ಯದಲ್ಲಿ ಆತಿಥೇಯ ವೈಷ್ಣವಿ ತಂಡ ಬಲಿಷ್ಠ ಹಾಲುಗುಂದ ತಂಡವನ್ನು ರೋಚಕ ಹೋರಾಟದಲ್ಲಿ 1-0 ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ವೈಷ್ಣವಿ ತಂಡದ ಸ್ಟಾರ್ ಸ್ಟ್ರೈಕರ್ ಡಿಡಿ ಪುನೀತ್ ಮಿಂಚಿನ ಗೋಲು ಗಳಿಸಿ ತಂಡದ ಗೆಲುವಿನ ರೂವಾರಿಯಾದರು.

ಸೆಮಿಫೈನಲ್ ಹೋರಾಟದಲ್ಲಿ ವಿಜಯನಗರ ಎಫ್ಸಿ ಮತ್ತು ಮಿಲನ್ಸ್ ಅಮ್ಮತ್ತಿ ಮುಖಾಮುಖಿಯಾಗಲಿದೆ. ಇನ್ನೊಂದು ಸೆಮಿಫೈನಲ್ಸ್‍ನಲ್ಲಿ ನೆಹರು ಎಫ್ಸಿ ತಂಡ ಆತಿಥೇಯ ವೈಷ್ಣವಿ ತಂಡವನ್ನು ಎದುರಿಸಲಿದೆ.