*ಗೋಣಿಕೊಪ್ಪಲು, ಡಿ. 14 : ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ನೂತನ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷರಾಗಿ ನೆಲ್ಲೀರ ಚಲನ್ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನೂತನ ಮಂಡಳ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮುಂದಿನ 3 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಮಂಡಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಕುಂಞಂಗಡ ಅರುಣ್ ಭೀಮಯ್ಯ ಅವರ ಮೂರು ವರ್ಷಗಳ ಅವಧಿ ಪೂರ್ಣಗೊಂಡ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಸಹ ಚುನಾವಣಾಧಿಕಾರಿ ರವಿ ಕಾಳಪ್ಪ, ಮಂಡಳ ಚುನಾವಣಾಧಿಕಾರಿ ಗುಮ್ಮಟ್ಟೀರ ಕಿಲನ್ ಗಣಪತಿ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆದಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೆಲ್ಲೀರ ಚಲನ್ ಮಾತನಾಡಿ; ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಪಕ್ಷವನ್ನು ಬಲಪಡಿಸುವ ಚಿಂತನೆ ಹೊಂದಲಾಗಿದೆ. ಶಾಸಕರ ಸಹಕಾರ ಮತ್ತು ಸಲಹೆಗಳೊಂದಿಗೆ ಗ್ರಾಮೀಣ ಭಾಗದ ಅಭಿವೃದ್ಧಿಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತೇನೆ. ಪಕ್ಷದ ಹಿರಿಯರ, ಕಿರಿಯರ ಸಹಕಾರದೊಂದಿಗೆ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇನೆ ಎಂಬ ಭರವಸೆ ನೀಡುತ್ತೇನೆ. ದೊಡ್ಡ ಜವಾಬ್ದಾರಿ ಯೊಂದು ನನ್ನ ಹೆಗಲಿನಲ್ಲಿದ್ದು, ಅದನ್ನು ನಿಭಾಯಿಸಲು ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಹೇಳಿದರು.

ಪ್ರಬಾರ ಚುನಾವಣಾಧಿಕಾರಿ ಉದಯ್‍ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ, ಮನು ಮುತ್ತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವಿಕುಶಾಲಪ್ಪ, ರಾಬಿನ್‍ದೇವಯ್ಯ, ರಾಜ್ಯ ಬಿಜೆಪಿ ಸದಸ್ಯೆ ಪಟ್ಟಡ ರೀನಾಪ್ರಕಾಶ್, ತಾಲೂಕು ಬಿಜೆಪಿ ಕಾರ್ಯದರ್ಶಿ ಲಾಲಾ ಭೀಮಯ್ಯ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆದಿದೆ.