ಕೂಡಿಗೆ, ಡಿ. 14: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆ ಪ್ರದೇಶದ ಸುಮಾರು 20 ಕ್ಕೂ ಹೆಚ್ಚು ಎಕರೆಯಷ್ಟು ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆಯನ್ನು ನಷ್ಟಪಡಿಸಿವೆ.

ರೈತರಾದ ಅಚ್ಚಯ್ಯ, ಸಣ್ಣಪ್ಪ, ಜವರೇಗೌಡ, ಬಸಪ್ಪ, ಚಿನ್ನಣ್ಣ ಸೇರಿದಂತೆ 25 ಕ್ಕೂ ಹೆಚ್ಚು ರೈತರ ಭತ್ತದ ಬೆಳೆ ಮಾತ್ರವಲ್ಲದೆ, ಕೇನೆ, ಕೆಸ, ಶುಂಠಿ, ತೆಂಗು, ಬಾಳೆ, ಅಡಿಕೆ ಬೆಳೆಗಳನ್ನು ಕೂಡ ನಾಶ ಪಡಿಸಿವೆ.

ಹಲವಾರು ಬಾರಿ ಅರಣ್ಯ ಇಲಾಖೆಗೆ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ರೈತರು, ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಒಂದು ಬದಿಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕಾಯುತ್ತಿದ್ದರೇ, ಕಾಡಾನೆ ಹಿಂಡು ಮತ್ತೊಂದು ಕಡೆಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಮಗಳತ್ತ ಬರುತ್ತಿವೆ.

ಪ್ರತಿಭಟನೆಗೆ ಸಿದ್ಧತೆ

ಕಾಡಾನೆ ಹಾವಳಿಯನ್ನು ವಿರೋಧಿಸಿ ನಾಲ್ಕು ಗ್ರಾಮಗಳ ನೂರಾರು ಗ್ರಾಮಸ್ಥರು ತಾ. 16 ರಂದು ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ.

ಕೂಡಿಗೆ ಸಮೀಪದ ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಸಿದ್ಧಲಿಂಗಪುರ, ಹರಶಿನಕುಪ್ಪೆ, ಅಳಿಲುಕುಪ್ಪೆ, ಅಳುವಾರ ಹಾಗೂ ಬಾಣವಾರ ಗ್ರಾಮದ ಗ್ರಾಮಸ್ಥರು ಬಾಣವಾರ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.

ಅಲ್ಲದೇ ಕಾಡಾನೆ ದಾಳಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.

ತೊರೆನೂರು ಗ್ರಾ.ಪಂ ಸದಸ್ಯ ರವಿಕುಮಾರ್, ಸಿದ್ಧಲಿಂಗಪುರದ ಎನ್.ಎಂ. ಬೋಪಯ್ಯ, ರಮೇಶ್. ಎ.ಕೆ, ಶಶಿಕುಮಾರ್, ಮಧು ಹಾಗೂ ನೂರಾರು ಗ್ರಾಮಸ್ಥರು ಸಭೆಯಲ್ಲಿ ಹಾಜರಿದ್ದರು.