ಮಡಿಕೇರಿ, ಡಿ. 15: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಮಾಸಿಕ ಸಭೆ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಲೇಜಿಗೆ ನೂತನ ಗೇಟ್ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜನವರಿಯಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕೆಲಸ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಚರ್ಚಿಸಲಾಯಿತು. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳಿಂದ ಕಾಲೇಜಿನ ಅಭಿವೃದ್ಧಿಗೆ ಧನ ಸಹಾಯ ಪಡೆಯುವಂತೆ ತೀರ್ಮಾನಿಸಲಾಯಿತು.
ಕಾಲೇಜಿಗೆ ತೆರಳುವ ರಸ್ತೆಯನ್ನು ದುರಸ್ತಿ ಮಾಡುವಂತೆ ಸಂಘದಿಂದ ಇತ್ತೀಚೆಗೆ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದಕ್ಕೆ ಅಪರ ಜಿಲ್ಲಾಧಿಕಾರಿಗಳು ಸ್ಪಂದಿಸಿ ಕಾಮಗಾರಿಯನ್ನು ಆದಷ್ಟು ಶೀಘ್ರ ಮಾಡುವಂತೆ ನಗರಸಭೆಗೆ ಸೂಚಿಸಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ ಸಭೆಗೆ ಮಾಹಿತಿ ನೀಡಿದರು.
ಎಫ್‍ಎಂಕೆಎಂಸಿ ಕಾಲೇಜಿನಲ್ಲಿ ಇಲ್ಲಿಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರೂ ಹಳೆ ವಿದ್ಯಾರ್ಥಿಗಳ ಸಂಘದಲ್ಲಿ ಸದಸ್ಯತ್ವ ಕಡಿಮೆಯಿದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅಭಿಮಾನವಿಟ್ಟು ಸಂಘದ ಸದಸ್ಯತ್ವವನ್ನು ಆದಷ್ಟು ಬೇಗ ಪಡೆದುಕೊಂಡು ಸಹಕಾರ ನೀಡುವಂತೆ ಬೊಳ್ಳಜಿರ ಅಯ್ಯಪ್ಪ ಕೋರಿದರು. ಸದಸ್ಯತ್ವ ಪಡೆಯ ಬಯಸುವವರು ಹೆಚ್ಚಿನ ಮಾಹಿತಿಗೆ 9481762979, 9880778047 ಅನ್ನು ಸಂಪರ್ಕಿಸಬಹುದು.
ಕಾಲೇಜಿನ ನೂತನ ಗೇಟ್‍ನ ಕಾಮಗಾರಿ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಧನ ಸಹಾಯ ಮಾಡುವವರು ಮಡಿಕೇರಿ ಕೆನೆರಾ ಬ್ಯಾಂಕ್ (ವೆಸ್ಟ್), ಖಾತೆಯ ಹೆಸರು : ಎಫ್‍ಎಂಕೆಎಂಸಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘ, ಖಾತೆ ಸಂಖ್ಯೆ : 1654101007803, ಐಎಫ್‍ಎಸ್‍ಸಿ ಕೋಡ್ : ಸಿಎನ್‍ಆರ್‍ಬಿ 0001654 ಈ ಖಾತೆಗೆ ಹಣ ಪಾವತಿಸಬಹುದಾಗಿದೆ.
ಸಭೆಯಲ್ಲಿ ಸಂಘ ಉಪಾಧ್ಯಕ್ಷರಾದ ನಾಟೋಳಂಡ ಚರ್ಮಣ, ನಿರ್ದೇಶಕರಾದ ನಂದಿನೆರವಂಡ ಅಪ್ಪಯ್ಯ, ಬೊಪ್ಪಂಡ ಶ್ಯಾಮ್ ಪೂಣಚ್ಚ, ಮೊಣ್ಣಂಡ ಶೋಭಾ ಸುಬ್ಬಯ್ಯ, ಕಂಬಿರಂಡ ಬೋಜಮ್ಮ, ಕಿಶೋರ್ ರೈ ಕತ್ತಲೆಕಾಡು, ವಿಘ್ನೇಶ್ ಎಂ. ಭೂತನಕಾಡು ಪಾಲ್ಗೊಂಡಿದ್ದರು.