ಚೆಟ್ಟಳ್ಳಿ, ಡಿ. 15: ಎಲ್ಲೆಲ್ಲೂ ಕಾಡಾನೆಗಳ ಉಪಟಳದ ಬಗ್ಗೆ ನಿತ್ಯವೂ ಕೇಳುತಿದ್ದೇವೆ ಅದರೆ ಅರಣ್ಯಇಲಾಖೆ ಏನು ಮಾಡುತಿದೆ? ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಯಿತೇ? ಎಂಬೆಲ್ಲ ಮಾತುಗಳು ಕೇಳಿ ಬರುತಿದ್ದರೂ ಚೆಟ್ಟಳ್ಳಿ ಸಮೀಪದ ಮೀನುಕೊಲ್ಲಿ ಮೀಸಲು ಅರಣ್ಯವಾಪ್ತಿಯಿಂದ ಕಾಡಾನೆಗಳ ದಂಡನ್ನು ನಿಯಂತ್ರಿಸಲು ಆ್ಯಂಟಿ ಪೋಚಿಂಗ್‍ಕ್ಯಾಂಪ್ ಹಾಗೂ ರೈಲುಕಂಬಿ ಅಳವಡಿಕೆಗೆ ಸಿದ್ದತೆ ನಡೆಯುತ್ತಿದೆ.
ಸಂಜೆಯಾಗುತ್ತಲೆ ಕಾಡಾನೆಗಳ ಹಿಂಡು ಅರಣ್ಯದೊಳಗಿಂದ ದಾಟಿ ಚೆಟ್ಟಳ್ಳಿ ಸಮೀಪದ ಕಾಫಿ ಉಪಸಂಶೋಧನಾ ಕೇಂದ್ರದ ಕಾಫಿ ತೋಟದ ಮೂಲಕ ಹಾದು ಸುತ್ತಲಿನ ರೈತರು ಬೆಳೆದ ಭತ್ತ ಬೆಳೆಯನ್ನು ತಿಂದು ನಾಶಪಡಿಸಿ ಬೆಳಗಿನ ಜಾವ ಅರಣ್ಯದೊಳಕ್ಕೆ ಸೇರಿಬಿಡುತ್ತವೆ. ಕಾಡಾನೆಗಳ ಉಪಟಳದಿಂದ ಸುತ್ತಲಿನ ರೈತರು ಬೇಸತ್ತುಹೋಗಿದ್ದಾರೆ. ಈ ಕಾಡಾನೆಗಳು ಅರಣ್ಯದಿಂದ ಬರದಂತೆ ಅರಣ್ಯದ ಸುತ್ತಲು ಆನೆಕಂದಕವನ್ನು ತೆಗೆಯಲಾಗಿದ್ದರೂ ಆನೆಗಳು ಹೇಗಾದರೂ ಮಾಡಿ ಕಾಡುಬಿಟ್ಟು ಬರುತ್ತವೆ. ಬಂದ ಆನೆಗಳು ಹಿಂದಿರುಗಲಾಗದೆ ರಸ್ತೆ ಉದ್ದಕ್ಕೂ ಓಡಾಡಿ ತೀವ್ರತೊಂದರೆ ಅನುಭವಿಸಿದ್ದರಿಂದ ಆನೆಗಳು ನಿತ್ಯವೂ ದಾಟುವ ಜಾಗದಲ್ಲೆ ಅರಣ್ಯ ಇಲಾಖೆಯಿಂದ ಆನೆ ಕಂದಕಕ್ಕೆ ಮಣ್ಣು ಮುಚ್ಚಿ ಕಾಡಾನೆ ತೆರಳಲು ದಾರಿ ಮಾಡಿಕೊಡಲಾಯಿತು.
ನಂತರ ಕಾಡಾನೆಯನ್ನು ಅರಣ್ಯದೊಳಗೆ ತಡೆಹಿಡಿಯಲು ಕಬ್ಬಿಣದ ಸಲಾಖೆಯ ಮುಳ್ಳಿನ ಗೇಟನ್ನು ಮಾಡಲಾಯಿತು. ಆದರೆ ಕೆಲವು ತಿಂಗಳುಗಳ ಹಿಂದೆ ಸುಪ್ರೀಂಕೋರ್ಟ್‍ನ ಆದೇಶದ ಹಿನ್ನೆಲೆಯಲ್ಲಿ ಕಬ್ಬಿಣ ಸಲಾಖೆಯ ಮುಳ್ಳಿನ ತಂತಿಗಳನ್ನೆಲ್ಲ ಅರಣ್ಯ ಇಲಾಖೆಯೇ ತೆಗೆಸಬೇಕಾಯಿತು. ಕಾಡಾನೆಗಳು ದಾಟಿಬರದಂತೆ ಅರಣ್ಯ ಸಿಬ್ಬಂದಿ ಉದ್ದನೆಯ ಮರದ ಕೊಂಬೆಯ ಮೇಲೆ ಮರದ ಅಟ್ಟಣಿಗೆಯನ್ನು ಮಾಡಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ರಾತ್ರಿ ಇಡೀ ಕಾವಲಿದ್ದು, ಕಾಡಾನೆಗಳನ್ನು ಕಾಡಿಗೆ ಓಡಿಸುತ್ತಿದ್ದಾರೆ. ವಿದೇಶಿ ಕಂಪನಿಯೊಂದು ಆನೆದಾಟುವ ಜಾಗದಲ್ಲಿ ವಾಸನೆಬರಿತ ಮದ್ದನ್ನು ಹತ್ತಿಗೆ ಅದ್ದಿ ಡಬ್ಬಗಳಲ್ಲಿ ನೇತುಹಾಕಿ ಪ್ರಯೋಗ ಮಾಡಿದರೂ ಅದು ಫಲಕಾರಿಯಾಗಲಿಲ್ಲ.
ಕಿತ್ತು ಹೋದ ಅಟ್ಟಣಿಗೆ
ಅರಣ್ಯದೊಳಗೆ ಆನೆಯನ್ನು ಕಾಡಿಗೆ ಓಡಿಸಲು ಸಿಬ್ಬಂದಿ ನಿರ್ಮಿಸಿಕೊಂಡ ಮರದ ಮೇಲಿನ ಅಟ್ಟಣಿಗೆಯ ಮರ ಒಣಗಿ ಅಟ್ಟಣಿಗೆ ಕಿತ್ತುಹೋಗಿದೆ. ಅರಣ್ಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲಿಸಿ ಆನೆದಾಟುವ ಜಾಗದ ಸಮೀಪ ಸಿಬ್ಬಂದಿಗಳ ಆ್ಯಂಟಿ ಪೊಚಿಂಗ್ ಕ್ಯಾಂಪ್ ವಸತಿ ಗೃಹವನ್ನು ನಿರ್ಮಿಸಲು ಮುಂದಾಗಿ ಈಗಾಲೇ ನಿರ್ಮಾಣ ಕಾರ್ಯ ಪ್ರಾರಂಭಿಸ ಲಾಗಿದೆ. ವಸತಿಗೃಹ ನಿರ್ಮಾಣವಾದರೆ ಆನೆನಿಯಂತ್ರಣ ಹಾಗೂ ಅರಣ್ಯಗಳ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದು ಮೀನುಕೊಲ್ಲಿ ಉಪವಿಭಾಗದ ಉಪವಲಯ ಅರಣ್ಯಾಧಿಕಾರಿ ಸುಭ್ರಾಯ ಹೇಳುತ್ತಾರೆ.
ರೈಲುಕಂಬಿ ಅಳವಡಿಕೆಗೆ ಸಿದ್ಧತೆ
ಮೀನುಕೊಲ್ಲಿ ಅರಣ್ಯ ದಂಚಿನಲ್ಲಿರುವ ಚೆಟ್ಟಳ್ಳಿ, ಪೊನ್ನತ್‍ಮೊಟ್ಟೆ, ಕಂಡಕರೆಯವರೆಗೆ ಕಾಡಾನೆಗಳು ದಾಟುವ ಜಾಗದ ಸುತ್ತಲು ಸುಮಾರು 5 ಕಿ.ಮೀ. ರೈಲು ಕಂಬಿಗಳನ್ನು ಅಳವಡಿಸಲು ಸರ್ವೆಕಾರ್ಯ ಮುಗಿದಿದ್ದು, ಕೆಲವೇ ತಿಂಗಳುಗಳಲ್ಲಿ ನಾಗರಹೊಳೆ ಹಾಗೂ ಹಲವು ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡಾನೆಗಳ ತಡೆಗೆ ರೈಲು ಕಂಬಿಗಳನ್ನು ಅಳವಡಿಸಲಾದ ಮಾದರಿಯಲ್ಲೇ ರೈಲು ಕಂಬಿಗಳನ್ನು ಅಳವಡಿಸ ಲಾಗುವುದೆಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
- ಕರುಣ್ ಕಾಳಯ್ಯ