ಒಡೆಯನಪುರ, ಡಿ.14: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜ. 31 ಮತ್ತು ಫೆ.1 ರಂದು ನಿಡ್ತ ಗ್ರಾ.ಪಂ.ವ್ಯಾಪ್ತಿಯ ನಿಡ್ತ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಜಿಲ್ಲಾ ಮಟ್ಟದ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಮತ್ತು ಕಸಾಪದ ಜಿಲ್ಲಾ, ತಾಲೂಕು ಮತ್ತು ಹೋಬಳಿ ಪದಾಧಿಕಾರಿಗಳ ಸಮ್ಮುಖದಲ್ಲಿ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಮ್ಮೇಳನ ಮತ್ತು ಪೂರ್ವಭಾವಿ ಸಭೆಯ ಉದ್ದೇಶದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್‍ಸಾಗರ್ ರಾಜ್ಯದಲ್ಲಿ ಪ್ರಸ್ತುತ ವರ್ಷ ಸೇರಿದಂತೆ ಕಳೆದ 2 ವರ್ಷಗಳಲ್ಲಿ ಜಲ ಪ್ರಳಯದಿಂದ ಜನರಿಗೆ, ಆಸ್ತಿಪಾಸ್ತಿಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿರುವುದರಿಂದ ಸರಕಾರ ಕನ್ನಡ ಸಾಹಿತ್ಯ ಸಮೇಳನ, ಇತರೆ ಉತ್ಸವಗಳಿಗೆ ಅನುದಾನ ಕೊಡುವುದಿಲ್ಲ ಈ ನಿಟ್ಟಿನಲ್ಲಿ ಕಸಾಪ ಹಣ ಭರಿಸಿ ಸಮ್ಮೇಳನ ನಡೆಸುತ್ತಿದೆ ಈ ದಿಸೆಯಲ್ಲಿ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಎಲ್ಲಾ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಸ್ವಾಗತ, ವೇದಿಕೆ, ಆಹಾರ, ಆರ್ಥಿಕ, ಸಾಂಸ್ಕøತಿಕ ಸೇರಿದಂತೆ ವಿವಿಧ ಉಪ ಸಮಿತಿಗಳ ರಚನೆ ಮಾಡಲಾಯಿತು. ಉಪ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಂದಿನ ದಿನದಲ್ಲಿ ಸಂಬಂದ ಪಟ್ಟ ಉಪ ಸಮಿತಿ ಪದಾಧಿಕಾರಿಗಳು ಸಮ್ಮೇಳನದ ರೂಪರೇಷೆಗಳ ಕುರಿತಾದ ಸಭೆಯನ್ನು ನಡೆಸಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ.ನಾಗಪ್ಪ, ನಿಡ್ತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಶೇಷಾದ್ರಿ ಸಮ್ಮೇಳನದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಿ.ಪಂ.ಸದಸ್ಯೆ ಸರೋಜಮ್ಮ, ಶನಿವಾರಸಂತೆ ಕಸಾಪ ಅಧ್ಯಕ್ಷ ಬಿ.ಬಿ.ನಾಗರಾಜ್ ಮಾತನಾಡಿದರು. ಸಭೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ವಿಜೇತ್, ಜಿಲ್ಲಾ ಕಸಾಪ ಮಾಧ್ಯಮ ಸಲಹೆಗಾರ ಅಶ್ವಥ್, ಕಸಾಪ ಪ್ರಮುಖರಾದ ಪ್ರಸನ್ನ, ಹೆಚ್.ಬಿ.ಜಯಮ್ಮ, ಡಿ.ಬಿ.ಸೋಮಪ್ಪ, ಹೋಬಳಿ ಕಸಾಪ ಪದಾಧಿಕಾರಿಗಳು, ಗ್ರಾ.ಪಂ.ಸದಸ್ಯರು, ವಿವಿಧ ಸಂಘ-ಸಂಸ್ಥೆ ಪ್ರಮುಖರು ಹಾಜರಿದ್ದರು.