ಗೋಣಿಕೊಪ್ಪಲು, ಡಿ. 15: ಪ್ರತಿಯೊಬ್ಬ ನಾಗರಿಕನು ಸ್ವಾವಲಂಬಿ ಜೀವನ ಸಾಗಿಸುವಂತಾಗಬೇಕೆಂದು ಉಗಮ ಚೇತನ ಟ್ರಸ್ಟ್‍ನ ರಾಜ್ಯಾಧ್ಯಕ್ಷೆ ಪ್ರಿಯ ರಮೇಶ್ ಕಿವಿಮಾತು ಹೇಳಿದರು.

ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಳ್ಳಿಗಟ್ಟುವಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ಮಹಿಳೆಯರಿಗೆ ತಮ್ಮ ಟ್ರಸ್ಟ್ ವತಿಯಿಂದ ಹೊಲಿಗೆ ಯಂತ್ರವನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಹೆಚ್ಚಾಗಿ ವಿದ್ಯಾವಂತರಾಗಬೇಕು, ಮೌಢ್ಯತೆಯಿಂದ ಹೊರಬರಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು. ತರಬೇತಿ ನೀಡುವ ಶಿಕ್ಷಕಿಗೆ ವೇತನ ನೀಡುವ ಭರವಸೆಯೊಂದಿಗೆ ಆರು ತಿಂಗಳ ಕೋರ್ಸ್ ಮುಗಿಸಿದ ಮಹಿಳೆಯರಿಗೆ ದೃಢೀಕರಣ ಪತ್ರ ನೀಡುವುದಾಗಿ ತಿಳಿಸಿದರು.

ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಮೂಕಳೇರ ಆಶಾ ಪೂಣಚ್ಚ ಕಾರ್ಯಕ್ರಮ ಉದ್ಘಾಟಿಸಿ, ಪಂಚಾಯಿತಿ ಅನುದಾನದಿಂದ ಈ ಭಾಗಕ್ಕೆ ಸೋಲಾರ್ ದೀಪಗಳನ್ನು ಅಳವಡಿಸಲು ಅನುದಾನವನ್ನು ಮೀಸಲಿಟ್ಟಿದ್ದೇನೆ. ಮಹಿಳೆಯರು ಹೆಚ್ಚಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಬೇಕು ಎಂದರು.

ಬಹುಜನ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಶಾಶ್ವತ ನೆಲೆ ಕಂಡುಕೊಳ್ಳಲು ಆದಿವಾಸಿಗಳು ಕಷ್ಟ ಪಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಲಾಗಿದೆ. ಮುಂದೆ ಜಿಲ್ಲಾಡಳಿತದಿಂದ ಮೂಲಭೂತ ಸೌಕರ್ಯ ಸಿಗುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆದಿವಾಸಿಗಳ ತಾಲೂಕು ಅಧ್ಯಕ್ಷೆ ತಾಯಮ್ಮ ಪ್ರಾಸ್ತವಿಕವಾಗಿ ಮಾತನಾಡಿ, ಹಾಡಿಯ ಸಮಸ್ಯೆಗಳನ್ನು ವಿವರಿಸಿದರು. ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟಗಾರರಾದ ಹೇಮಂತ್ ಸುಖ್‍ದೇವ್ ಮಾತನಾಡಿದರು. ಸಭೆಯಲ್ಲಿ ಹೊದೂರು ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವತಿ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಿಕೋದ್ಯಮದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ‘ಕೊಡಗು ಧ್ವನಿ’ ವಾರಪತ್ರಿಕೆಯ ಸಂಪಾದಕ ಹೆಚ್.ಕೆ. ಜಗದೀಶ್ ಹಾಗೂ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಮೂಕಳೇರ ಆಶಾ ಪೂಣಚ್ಚ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಹಾಡಿಯ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು. ಹಾಡಿಯ ನಿವಾಸಿ ಕುಸುಮ ಸ್ವಾಗತಿಸಿ, ವಂದಿಸಿದರು.