ಕೂಡಿಗೆ, ಡಿ. 14: ರಾಜ್ಯ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಿದ್ದೇವೆ ಎಂದು ರೈತರ ಸಾಲ ಮನ್ನಾದ ಪಟ್ಟಿಯನ್ನು ಆಯಾ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕೇಂದ್ರದ ಕಚೇರಿಗಳಿಗೆ ನೀಡಲಾಗಿದೆ. ಕಚೇರಿಯವರು ಸೂಚನ ಫಲಕಗಳಲ್ಲಿ ಸಾಲಮನ್ನಾ ರೈತರ ಹೆಸರು ಮತ್ತು ಮನ್ನಾವಾದ ಸಾಲದ ಮೊತ್ತವನ್ನು ನಮೂದಿಸಿರುತ್ತಾರೆ. ಆದರೆ, ಪಟ್ಟಿ ಬಿಡುಗಡೆಯಾಗಿ ಸುಮಾರು ಎಂಟು ತಿಂಗಳುಗಳೇ ಕಳೆದರೂ ಕೆಲವು ರೈತರಿಗೆ ಸಾಲ ಮನ್ನಾದ ಹಣ ಮಾತ್ರ ಕೈಸೇರಿಲ್ಲ.
ಸಾಲಮನ್ನಾ ಯೋಜನೆಯು ರಾಜ್ಯದಲ್ಲಿ ಸಮರ್ಪಕವಾಗಿ ರೈತನಿಗೆ ದೊರಕಬೇಕೆಂಬ ಚಿಂತನೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿನ ಸಹಕಾರದೊಂದಿಗೆ ಪ್ರತಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ರೈತನ ದಾಖಲಾತಿ ಮತ್ತು ಸಹಕಾರ ಸಂಘದ ಸದಸ್ಯತ್ವದ ಅನ್ವಯ ನೀಡಲಾಗಿದೆ. ಸಾಲ ಮನ್ನಾದ ಹಣವನ್ನು ಪಟ್ಟಿಯಲ್ಲಿ ಬಿಡುಗಡೆಗೊಂಡ ಅನ್ವಯ ಆಯಾ ರೈತರು ಜಿಲ್ಲಾ ಕೇಂದ್ರ ಬ್ಯಾಂಕಿನ ಉಪ ಕಚೇರಿಯ ಎಟಿಎಂಗಳಲ್ಲಿ ಪಡೆಯುವಂತೆ ಸೂಚಿಸಲಾಗಿದೆ. ಆದರೆ ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ತೊರೆನೂರು, ಹೆಬ್ಬಾಲೆ, ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮನ್ನಾದ ಪಟ್ಟಿಗಳನ್ನು ನಮೂದಿಸಲಾಗಿದೆ.
ಸಾಲಮನ್ನಾದ ಮೊದಲ ಪಟ್ಟಿಯು ಬಿಡುಗಡೆಗೊಂಡು ಎಂಟು ತಿಂಗಳು ಕಳೆದಿವೆ. ಶೇ.80 ರಷ್ಟು ರೈತರಿಗೆ ಸಾಲ ಮನ್ನಾದ ಹಣ ಬಂದಿದ್ದು, ಇನ್ನುಳಿದ ರೈತರಿಗೆ ಸಾಲ ಮನ್ನಾ ಯೋಜನೆಯ ಹಣ ಬಂದಿರುವುದಿಲ್ಲ. ಆದರೆ ಈಗಾಗಲೇ 2, 3 ಮತ್ತು 4ನೇ ಪಟ್ಟಿಯು ಬಿಡುಗಡೆಗೊಂಡಿದ್ದು, ಆ ಪಟ್ಟಿಯಲ್ಲಿರುವ ಕೆಲವು ಮಂದಿಗೆ ಸಾಲಮನ್ನಾ ಹಣ ಬಿಡುಗಡೆಗೊಂಡಿದೆ. ಆದರೆ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ರೈತರ ಹೆಸರಿದ್ದರೂ ಅಂತಹವರಿಗೆ ಸಾಲ ಮನ್ನಾದ ಹಣ ಇನ್ನು ಬಂದಿಲ್ಲದ ಬಗ್ಗೆ ರೈತರು ದಿನಂಪ್ರತಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪ ಕಚೆÉೀರಿಗೆ ಅಲೆಯುತ್ತಿದ್ದಾರೆ. ಜಿಲ್ಲೆಗೆ ಈಗಾಗಲೇ ಸಾಲ ಮನ್ನಾದ ಹಣವು ಸಹಕಾರ ಸಂಘಗಳಲ್ಲಿ ಬಂದು ಶೇ.90 ರಷ್ಟು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಬಾಕಿ ಉಳಿದಿರುವ ರೈತರ ದಾಖಲಾತಿಗಳನ್ನು ಸಮರ್ಪಕವಾಗಿ ರಾಜ್ಯ ಮಟ್ಟದ ಅಧಿಕಾರಿಗಳು ಪರಿಶೀಲಿಸಬೇಕಾಗಿದೆ. ಅಲ್ಲದೆ, ಪಟ್ಟಿಯಲ್ಲಿ ರೈತರ ಹೆಸರಿದ್ದರೂ ಆಧಾರ್‍ಕಾರ್ಡ್, ಪಡಿತರ ಚೀಟಿ ನೀಡಬೇಕು ಎಂಬ ನೆಪದಲ್ಲಿ ಇದುವರೆಗೂ ಅಂತಹವರಿಗೆ ಹಣ ಬಿಡುಗಡೆಯಾಗಿರುವುದಿಲ್ಲ. ಸಂಬಂಧಪಟ್ಟ ಸಹಕಾರ ಸಂಘಗಳು ಆಯಾ ವ್ಯಾಪ್ತಿಯ ರೈತರ ದಾಖಲಾತಿಗಳನ್ನು ಪಡೆದು ಸಮರ್ಪಕವಾಗಿ ಜಿಲ್ಲಾ ಕೇಂದ್ರ ಬ್ಯಾಂಕಿಗೆ ಒದಗಿಸಲಾಗಿದೆ. ಆದರೆ, ತಾಂತ್ರಿಕ ನೆಪವೊಡ್ಡಿ ಸರ್ಕಾರ ಮಟ್ಟದ ಅಧಿಕಾರಿಗಳು ಜಿಲ್ಲೆಗೆ ಇನ್ನೂ ಬಾಕಿ ಇರುವ ಸಾಲ ಮನ್ನಾದ ಹಣ ಬಿಡುಗಡೆಯಾಗದೇ ಇರುವುದರಿಂದ ಸಣ್ಣ ರೈತರಿಗೆ ಭಾರಿ ತೊಂದರೆ ಯಾಗಿರುತ್ತದೆ. ಸಂಬಂಧಪಟ್ಟ ಜಿಲ್ಲಾ ಕೇಂದ್ರ ಬ್ಯಾಂಕಿನವರು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ವ್ಯವಹರಿಸಿ, ಹೋಬಳಿ ವ್ಯಾಪ್ತಿಯ ಸಹಕಾರ ಸಂಘಗಳ ರೈತರಿಗೆ ಸಾಲ ಮನ್ನಾ ಯೋಜನೆಯ ಸವಲತ್ತನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಸಂಘಗಳ ನಿರ್ದೇಶಕರಾದ ಟಿ.ಕೆ. ವಿಶ್ವನಾಥ್, ಟಿ.ಕೆ. ಪಾಂಡುರಂಗ, ಚಂದ್ರಪ್ಪ, ಜಗದೀಶ್, ಮಂಜಯ್ಯ ಸೇರಿದಂತೆ ರೈತರು ಆಗ್ರಹಿಸಿದ್ದಾರೆ.