ಮಡಿಕೇರಿ, ಡಿ. 14: ಸೂರ್ಯನು ಪ್ರತ್ಯಕ್ಷ ಬೆಳಕಿನೊಂದಿಗೆ (ವಿಸಿಬಲ್ ಲೈಟ್), ಇನ್ಫ್ರಾರೆಡ್ ಹಾಗೂ ಅಲ್ಟ್ರಾವೈಲೆಟ್ ಕಿರಣಗಳನ್ನು ಹೊರಸೂಸುವುದು ಸಹಜ. ಇವೆರಡು ಕಿರಣಗಳು ನಮಗೆ ಕಾಣದಿದ್ದರೂ ಇವುಗಳ ಪರಿಣಾಮ ನಮ್ಮ ಮೇಲೆ ಸದಾ ಇರುತ್ತದೆ. ಸೂರ್ಯನನ್ನು ಅಥವಾ ಅತೀ ಹೆಚ್ಚು ಪ್ರಕಾಶಮಾನವಿರುವ ವಸ್ತುಗಳನ್ನು ನೋಡಿದ ತಕ್ಷಣ ನಮ್ಮ ಕಣ್ಣಿನಲ್ಲಿರುವ ಅಂಗವಾದ ‘ಐರಿಸ್’ ತನ್ನಷ್ಟಕ್ಕೆ ಅದರ ಅಗಲ ಕಡಿಮೆಮಾಡಿ ಕಡಿಮೆ ಬೆಳಕು ಸಂಗ್ರಹಿಸುವುದರ ಮೂಲಕ ಕಣ್ಣಿಗೆ ಹಾನಿಯಾಗದ ಹಾಗೆ ರಕ್ಷಣೆ ಮಾಡುತ್ತದೆ. ಆದರೆ ಅತೀ ಹೆಚ್ಚು ಸಮಯ ಸೂರ್ಯನನ್ನು ನಮ್ಮ ಕಣ್ಣಿನಿಂದ ಗ್ರಹಿಸಿದರೆ ಕುರುಡಾಗುವ ಸಾಧ್ಯತೆ ಇರುತ್ತದೆ. ಇದೇ ‘ಐರಿಸ್’ ಕಡಿಮೆ ಬೆಳಕು ಇದ್ದಾಗ ತನ್ನಷ್ಟಕ್ಕೆ ಅಗಲವಾಗಿ ಹೆಚ್ಚು ಬೆಳಕನ್ನು ಸಂಗ್ರಹಿಸಿ ವಸ್ತುಗಳನ್ನು ವೀಕ್ಷಿಸುವಲ್ಲಿ ಸಹಕರಿಸುತ್ತದೆ.ಇಷ್ಟೆಲ್ಲ ಕೆಲಸ ಮಾಡುವ ಸಣ್ಣ ಅಂಗವಾದ ‘ಐರಿಸ್’ ಸೂರ್ಯ ಗ್ರಹಣದ ಸಂದರ್ಭ ಸ್ವಲ್ಪ ಗೊಂದಲಕ್ಕೆ ಒಳಗಾಗುತ್ತದೆ. ಸಂಪೂರ್ಣ ಸೂರ್ಯಗ್ರಹಣದ ಸಂದರ್ಭ ಸೂರ್ಯನ ಕಿರಣಗಳು ಭೂಮಿಗೆ ಬೀಳದ ಹಾಗೆ ಪೂರ್ತಿ ಕಡಿತಗೊಳ್ಳುತ್ತವೆ. ಗ್ರಹಣ ಪ್ರಾರಂಭವಾಗುವ ಸಮಯ ಹಾಗೂ ಮುಗಿಯುವ ವೇಳೆ ಸೂರ್ಯನ ಪ್ರತ್ಯಕ್ಷ ಕಿರಣಗಳು ಸಂಪೂರ್ಣ ಸ್ಥಗಿತಗೊಳ್ಳದೆ ಸ್ವಲ್ಪ ಪ್ರಮಾಣದಲ್ಲಿ ಭೂಮಿ ತಲುಪುತ್ತವೆ. ಸೂರ್ಯನ ಪ್ರಕಾಶ ಕಡಿಮೆಯಾಗಿರುವದಾಗಿ ತಿಳಿದು ‘ಐರಿಸ್’ ತನ್ನ ಅಗಲವನ್ನು ಹೆಚ್ಚು ಮಾಡಿ ಹೆಚ್ಚು ಬೆಳಕನ್ನು ಸಂಗ್ರಹಿಸಲು ನೋಡುತ್ತದೆ. ಆದರೆ ಈ ಸಂದರ್ಭ ಪ್ರತ್ಯಕ್ಷ ಬೆಳಕು ಕಡಿಮೆ ಇರುತ್ತದೆ ಹೊರತು ಅಲ್ಟ್ರಾವೈಲೆಟ್ ಕಿರಣಗಳ ಪ್ರಮಾಣ ಕಡಿಮೆಯಾಗಿರುವುದಿಲ್ಲ. ಈ ಕಿರಣಗಳು ‘ಐರಿಸ್’ ಅಗಲವಾಗಿರುವ ದರಿಂದ ಸುಲಭವಾಗಿ ಕಣ್ಣಿನೊಳಗೆ ನುಗ್ಗಿ ಸೂಕ್ಷ್ಮ ಅಂಗಗಳಿಗೆ ಹಾನಿ ಉಂಟುಮಾಡುತ್ತದೆ. ಇದರಿಂದ ಕುರುಡಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
ಇದೇ ತಿಂಗಳ ತಾ.26 ರಂದು ಸೂರ್ಯಗ್ರಹಣ ಬೆಳಿಗ್ಗೆ ಸುಮಾರು 8 ರಿಂದ 11ರ ವರೆಗೆ ನಡೆಯಲಿದ್ದು ಇದನ್ನು ವೀಕ್ಷಿಸಲು ಅಲ್ರ್ಟಾವೈಲೆಟ್ ಕಿರಣಗಳನ್ನು ತಡೆಯುವ ವಿಶೇಷವಾಗಿ ತಯಾರಾಗಿರುವ ಕನ್ನಡಕಗಳನ್ನು ಆನ್‍ಲೈನ್‍ನಲ್ಲಿ ಖರೀದಿಸಿ ಇವುಗಳ ಮೂಲಕ ಗ್ರಹಣವನ್ನು ಸುರಕ್ಷಿತವಾಗಿ ನೋಡಬಹುದಾಗಿದೆ. ಆದರೆ, ಸಮಯ ಪರಿಮಿತಿಯೊಳಗೆ ಮಾತ್ರ ಬಳಸಬಹುದಾಗಿದೆ.
-ಪ್ರಜ್ವಲ್ ಜಿ.ಆರ್.