ಕುಶಾಲನಗರ, ಡಿ. 14: ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳಲ್ಲಿ, ಕೆಲವು ಮಾರಾಟ ಮಳಿಗೆಗಳಲ್ಲಿ ನಕಲಿ ಸಿಹಿ ತಿಂಡಿಗಳ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಮಕ್ಕಳ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿರುವ ಪ್ರಕರಣ ಇದಾಗಿದೆ. ಹೋಂ ಮೇಡ್ ಚಾಕಲೆಟ್ ಹೆಸರಿನಲ್ಲಿ ಈ ದಂಧೆ ಕಳೆದ ಕೆಲವು ವರ್ಷಗಳಿಂದ ಎಲ್ಲೆಡೆ ನಡೆಯುತ್ತಿದ್ದು ಜಿಲ್ಲೆಯ ಸ್ವ ಉದ್ಯೋಗಿಗಳ ಉದ್ಯಮಕ್ಕೆ ಕಪ್ಪುಚುಕ್ಕೆ ಬರಿಸುವ ಪ್ರಯತ್ನದ ದಂಧೆ ನಿಗೂಢವಾಗಿ ನಡೆಯುತ್ತಿದೆ.

ಆಂಧ್ರಪ್ರದೇಶದ ಹೈದರಾಬಾದ್‍ನಿಂದ ಸರಬರಾಜಾಗುವ ಚಾಕಲೆಟ್‍ನ ಮಾರಾಟದ ಪ್ರಮುಖ ಕೇಂದ್ರ ಕುಶಾಲನಗರದಲ್ಲಿದ್ದು ದಿನನಿತ್ಯ ಅಂದಾಜು 1 ಸಾವಿರ ಕೆಜಿ ತೂಕದ ಚಾಕಲೆಟ್‍ಗಳು ಮಾರಾಟವಾಗುತ್ತಿವೆ ಎನ್ನುವ ವರದಿ ಹೊರಬಿದ್ದಿದೆ. ದಿನನಿತ್ಯ ಪ್ರವಾಸಿಗರನ್ನು ವಂಚಿಸಿ ಮಾರಾಟ ಮಾಡುತ್ತಿರುವ ಈ ದಂಧೆಯಲ್ಲಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ವಂಚಕರು ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದು ಸರಕಾರಕ್ಕೆ ಭಾರೀ ಪ್ರಮಾಣದ ಆದಾಯವನ್ನು ವಂಚಿಸುತ್ತಿರುವುದು ಕಾಯಕವಾಗಿದೆ.ಈ ದಂಧೆಯ ಬೆನ್ನತ್ತಿ ಹೊರಟಾಗ ‘ಶಕ್ತಿ’ಗೆ ದೊರೆತ ಮಾಹಿತಿ ಮಾತ್ರ ಮಕ್ಕಳ ಪೋಷಕರನ್ನು ಬೆಚ್ಚಿ ಬೀಳಿಸುವಂತೆ ಮಾಡುವುದಂತೂ ಸತ್ಯ. ಕುಶಾಲನಗರ ಸೇರಿದಂತೆ ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಇಂತಹ ನಕಲಿ ಚಾಕಲೆಟ್‍ಗಳಿಗೆ ಭಾರೀ ಬೇಡಿಕೆಯಿದ್ದು ದಂಧೆಕೋರರು ನಿತ್ಯ ಲಕ್ಷಾಂತರ ರೂ.ಗಳ ಅಕ್ರಮ ಸಂಪಾದನೆ ಮಾಡುತ್ತಿರುವುದು ತನಿಖಾ ಸಂದರ್ಭ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದಿಂದ ಸರಬರಾಜಾಗುವ ಈ ಚಾಕಲೆಟ್‍ನ ಮೂಲ ಬೆಲೆ ಕೆಜಿಯೊಂದಕ್ಕೆ ರೂ. 125. ಆದರೆ ಜಿಲ್ಲೆಯಲ್ಲಿ ಗ್ರಾಹಕರಿಗೆ ಮಾರಾಟವಾಗುತ್ತಿರುವುದು ರೂ. 450ಕ್ಕೆ.

ಈ ಮೂಲಕ ದಿನವೊಂದಕ್ಕೆ ದಂಧೆಕೋರರು ಲಕ್ಷಾಂತರ ರೂ.ಗಳ ಆದಾಯ ಮಾಡುತ್ತಿರುವುದು ಬೆಚ್ಚಿಬೀಳುವ ಅಂಶವಾಗಿದೆ. ಈ ಚಾಕಲೆಟ್ ಮೂಲವಾಗಿ ಸಾಮಾನ್ಯ ಪೊಟ್ಟಣವೊಂದರಲ್ಲಿ ಜಿಲ್ಲೆಗೆ ಸರಬರಾಜಾಗುತ್ತಿದ್ದು ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಕೆಲವು ಅಕ್ರಮ ಗೋದಾಮುಗಳು ಇವುಗಳ ಪ್ಯಾಕಿಂಗ್ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಮಿಲ್ಕ್ ಚಾಕಲೆಟ್, ಡಾರ್ಕ್ ಚಾಕಲೆಟ್, ವೈಟ್ ಚಾಕಲೆಟ್‍ಗಳಾಗಿ ಸರಬರಾಜಾಗುತ್ತಿರುವ ಈ ಚಾಕಲೆಟ್‍ಗಳಿಗೆ ಹೋಂ ಮೇಡ್ ಎಂಬ ಹಣೆಪಟ್ಟಿ ತಗಲಿಸಿ ಹಲವು ಬಣ್ಣಬಣ್ಣದ ರ್ಯಾಪರ್‍ಗಳಲ್ಲಿ ಬಹುತೇಕ ಪ್ರವಾಸಿ ಕೇಂದ್ರಗಳ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಕೇರಳ ಮತ್ತು ತಮಿಳುನಾಡಿನ ಪ್ರವಾಸಿಗರು ಮುಗಿಬಿದ್ದು ಈ ಚಾಕಲೆಟ್‍ಗೆ ಬೇಡಿಕೆ ಇಡುತ್ತಿರುವುದು ಕಂಡುಬಂದ ದೃಶ್ಯ. ಇದರೊಂದಿಗೆ ಪುಟ್ಟ ಪುಟ್ಟ ಮಕ್ಕಳು ಹಠ ತೊಟ್ಟು ತಮ್ಮ ಪೋಷಕರ ಮೂಲಕ ಚಾಕಲೆಟ್ ಖರೀದಿಸುವ ವ್ಯವಸ್ಥೆ ನಡೆಯುತ್ತಿದೆ.

ಮೂಲದ ಪ್ರಕಾರ ಈ ಚಾಕಲೆಟ್‍ಗೆ ಹಾಕುವ ನಿಯಮಿತ ಪದಾರ್ಥಗಳ ಬದಲಿಯಾಗಿ ಸತ್ತ ಪ್ರಾಣಿಗಳ ಕೊಬ್ಬನ್ನು ಬಳಸುವುದೇ ಈ ಚಾಕಲೆಟ್ ರುಚಿರುಚಿಯಾಗಿ ಬಾಯಿಚಪ್ಪರಿಕೆಗೆ ಆಸ್ಪದ ನೀಡುತ್ತಿದೆ ಎನ್ನುವುದು ತಿಳಿದುಬಂದ ಅಂಶ. ಸತ್ತ ಹಂದಿಗಳು, ಒಂಟೆ, ದನ ಮತ್ತಿತರ ಪ್ರಾಣಿಗಳ ಕೊಬ್ಬನ್ನು ಕರಗಿಸಿ ನಕಲಿ ಚಾಕಲೆಟ್ ಮಾಡುವ ದಂಧೆ ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಬಿಕರಿ ಮಾಡಲು ಸೂಕ್ತ ಸ್ಥಳ ಕೊಡಗಿನ ಪ್ರವಾಸಿ ಕೇಂದ್ರಗಳಾಗಿದ್ದು ಎಲ್ಲಿ ನೋಡಿದರೂ ಚಾಕಲೆಟ್‍ಗಳದ್ದೆ ಪ್ರಪಂಚ ಕಾಣಬಹುದು. ಈ ಚಾಕಲೆಟ್ ಪೊಟ್ಟಣದ ಮೇಲೆ ಯಾವುದೇ ರೀತಿಯ ಅಧಿಕೃತ ವಿವರಗಳು, ಮಾಹಿತಿಗಳು ಲಭ್ಯವಿಲ್ಲದಿದ್ದು ಅವಧಿ ಮೀರಿದ ಚಾಕಲೆಟ್‍ಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಈ ಚಾಕಲೆಟ್ ಸೇವಿಸಿ ದಾರಿಯುದ್ದಕ್ಕೂ ವಾಂತಿ, ಬೇಧಿ ಮಾಡಿಕೊಂಡ ಹಲವು ಘಟನೆಗಳು ನಡೆದಿರುವುದಾಗಿ ಬೆಂಗಳೂರಿನ ಪ್ರವಾಸಿ ಕಾರು ಚಾಲಕ ನರೇಂದ್ರ ಎಂಬವರು ತಮ್ಮ ಅನುಭವದ ಬಗ್ಗೆ ‘ಶಕ್ತಿ’ಯೊಂದಿಗೆ ತೋಡಿಕೊಂಡಿದ್ದು, ಈ ರೀತಿಯ ನಕಲಿ ದಂಧೆ ನಡೆಯುವುದನ್ನು ತಕ್ಷಣ

(ಮೊದಲ ಪುಟದಿಂದ) ಕಡಿವಾಣ ಹಾಕಬೇಕಾಗಿದೆ. ಇಲ್ಲದಿದ್ದಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕಿ ಬೀಳುವ ಸಾಧ್ಯತೆ ಅಧಿಕ ಎನ್ನುತ್ತಾರೆ.

ನಿಯಮ ಪ್ರಕಾರ ಚಾಕಲೆಟ್ ರ್ಯಾಪರ್ ಮೇಲೆ ಅದಕ್ಕೆ ಅಳವಡಿಸುವ ಪದಾರ್ಥಗಳ ವಿವರ, ಎಫ್‍ಎಸ್‍ಎಸ್‍ಎಐ ಪರವಾನಗಿ ಸಂಖ್ಯೆ, ಬ್ಯಾಚ್ ನಂಬರ್, ತಯಾರಿಸಲಾದ ದಿನಾಂಕ, ಎಂಆರ್‍ಪಿ ದರ ಅಲ್ಲದೆ ಎಕ್ಸ್‍ಪೈರಿ ಡೇಟ್ ಇಲ್ಲದಿರುವುದು ಮತ್ತು ಈ ಚಾಕಲೆಟ್‍ನಲ್ಲಿ ಪೌಷ್ಠಿಕಾಂಶದ ವಿವರ, ಅಂಶ ಅಳವಡಿಸದೆ ದಂಧೆ ನಡೆಸುತ್ತಿರುವುದು ಖಚಿತಗೊಂಡಿದೆ.

‘ಶಕ್ತಿ’ ಕೆಲವು ಅಂಗಡಿಗಳಿಗೆ ಭೇಟಿ ಮಾಡಿ ಸಮಗ್ರ ಮಾಹಿತಿ ಕಲೆ ಹಾಕಿದಾಗ ಈ ಅಕ್ರಮ ದಂಧೆಯ ಸತ್ಯಾಂಶ ಹೊರಬಂದಿದೆ. ರ್ಯಾಪರ್‍ನಲ್ಲಿ ಅರ್ಧ ಕೆಜಿ ಚಾಕಲೆಟ್‍ಗೆ ರೂ. 225 ನಮೂದಿಸಿದ್ದು ಇದನ್ನು ಹೋಲ್ ಸೇಲ್ ವ್ಯಾಪಾರಿಗಳಿಗೆ ಮಾತ್ರ ರೂ. 85ಕ್ಕೆ ಮಾರಾಟ ಮಾಡಲಾಗುತ್ತಿದೆ. ನೇರವಾಗಿ ಗ್ರಾಹಕರಿಗೆ 3 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದರೊಂದಿಗೆ ಭಾರೀ ಪ್ರಮಾಣದ ವಂಚನೆ ಬಹಿರಂಗಗೊಂಡಿದೆÉ.

ಗ್ರಾಹಕರ ಸೋಗಿನಲ್ಲಿ ತೆರಳಿದ ‘ಶಕ್ತಿ’ಗೆ ಕೊಪ್ಪ ಸಮೀಪದ ಗೋಲ್ಡನ್ ಟೆಂಪಲ್ ರಸ್ತೆ ಬದಿಯ ವ್ಯಾಪಾರಿ ಒಬ್ಬರ ಪ್ರಕಾರ ಈ ಚಾಕಲೆಟ್‍ಗಳಿಗೆ ಪ್ರವಾಸಿಗರಿಂದ ಭಾರೀ ಬೇಡಿಕೆಯಿದೆ. ಬಹತೇಕ ಚಾಕಲೆಟ್‍ಗಳು ಸ್ಥಳೀಯವಾಗಿಯೇ ಪ್ಯಾಕಾಗುತ್ತಿದ್ದು ಬಗೆಬಗೆಯ ಚಾಕಲೆಟ್‍ಗಳ ಮಾರಾಟ ಮಾಡುತ್ತಿರುವುದಾಗಿ ‘ಶಕ್ತಿ’ಯೊಂದಿಗೆ ನಕಲಿ ಚಾಕಲೆಟ್ ವ್ಯಾಪಾರದ ಬಗ್ಗೆ ವಿವರ ಒದಗಿಸುತ್ತಾರೆ.

ಕುಶಾಲನಗರ ಮತ್ತು ಸುತ್ತಮುತ್ತ ಪ್ರವಾಸಿ ಕೇಂದ್ರಗಳಲ್ಲಿ ಅಂದಾಜು ಪ್ರಕಾರ ಮಾಸಿಕ 25 ಸಾವಿರ ಕೆ.ಜಿ.ಗಿಂತಲೂ ಅಧಿಕದಷ್ಟು ಪ್ರಮಾಣದ ಚಾಕಲೆಟ್ ವಿವಿಧ ಕೇಂದ್ರಗಳಲ್ಲಿ ಮಾರಾಟವಾಗುತ್ತಿದ್ದು ದಿನವೊಂದಕ್ಕೆ ಅಕ್ರಮವಾಗಿ ಲಕ್ಷಾಂತರ ರೂಪಾಯಿಗಳ ಆದಾಯ ಮಾಡುವುದರೊಂದಿಗೆ ಗ್ರಾಹಕರಿಗೆ ಭಾರೀ ಮೊತ್ತದ ವಂಚನೆ ಮಾಡುತ್ತಿರುವ ಪ್ರಕರಣ ಇದಾಗಿದೆ. ಇಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ ಮಾರಾಟ ಸಂದರ್ಭ ಸರಕಾರಕ್ಕೆ ಪಾವತಿಸಬೇಕಾದ ಜಿಎಸ್‍ಟಿಯನ್ನು ಕೂಡ ಇಲ್ಲಿ ವಂಚಿಸುತ್ತಿದ್ದು ಈ ಮೂಲಕ ಲಕ್ಷಾಂತರ ರುಗಳ ವಂಚನೆಯಾಗುವುದರೊಂದಿಗೆ ದಂಧೆಕೋರರು ಪ್ರವಾಸಿಗರನ್ನು ಲೂಟಿ ಮಾಡುತ್ತಿರುವುದು ದಿನನಿತ್ಯದ ಬೆಳವಣಿಗೆಯಾಗಿದೆ. ಕುಶಾಲನಗರ ಮತ್ತು ಬೈಲುಕೊಪ್ಪೆಯ ಆಯಕಟ್ಟಿನ ಪ್ರದೇಶಗಳಲ್ಲಿ 10ಕ್ಕೂ ಹೆಚ್ಚು ನಕಲಿ ಚಾಕಲೆಟ್‍ಗಳ ಗೋದಾಮುಗಳು ಕಾರ್ಯನಿರ್ವಹಿಸುತ್ತಿದ್ದು ಈ ದಂಧೆಯಲ್ಲಿ ಸ್ಥಳೀಯ ಕೆಲವರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೇರಳ ಮೂಲದ ವರ್ತಕರು ಶಾಮೀಲಾಗಿರುವುದು ‘ಶಕ್ತಿ’ಯ ತನಿಖಾ ಹಂತದಲ್ಲಿ ಹೊರಬಿದ್ದಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳು ಮಾತ್ರ ದಿವ್ಯ ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿದೆ.

ಈ ಎಲ್ಲಾ ಬೆಳವಣಿಗೆಗಳ ಕುರಿತು ಆಹಾರ ಇಲಾಖೆಯ ಹಿರಿಯ ಅಧಿಕಾರಿ ಶಿವಕುಮಾರ್ ಅವರನ್ನು 'ಶಕ್ತಿ' ಮಾತನಾಡಿಸಿದಾಗ ಅವರು ಪ್ರತಿಕ್ರಿಯಿಸಿದ್ದು, ಈ ರೀತಿಯ ಚಾಕಲೆಟ್‍ಗಳ ಮಾರಾಟಕ್ಕೆ ಆಹಾರ ಇಲಾಖೆ ನಿಯಮದಡಿಯಲ್ಲಿ ಅವಕಾಶವಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತಹ ದಂಧೆಕೋರರ ಮೇಲೆ ಕಾನೂನು ಕ್ರಮ ಜರುಗಿಸುವುದರೊಂದಿಗೆ ಅಂಗಡಿ ಮಳಿಗೆಗಳಲ್ಲಿ ಜಪ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಕಳಪೆ ಗುಣಮಟ್ಟದ ನಕಲಿ ಚಾಕಲೆಟ್ ಮಾರಾಟಗಾರರ ಮೇಲೆ ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ದಂಧೆಗೆ ಶಾಶ್ವತ ಕಡಿವಾಣ ಹಾಕಬೇಕು ಎನ್ನುವುದು ಚಾಕಲೆಟ್ ಪ್ರಿಯರ ಆಗ್ರಹವಾಗಿದೆ. ಇಂತಹ ಪ್ರಕರಣಗಳಿಂದ ನೈಜ ಹೋಂಮೇಡ್ ತಯಾರಕರಿಗೂ ತೊಂದರೆ ಆಗುತ್ತಿರುವುದು ಖಂಡಿತಾ.