ಮಡಿಕೇರಿ, ಡಿ.15: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಸಿಇಟಿ ಪರೀಕ್ಷೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವಿದ್ಯಾಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಒಟ್ಟು 115 ಮಕ್ಕಳಿಗೆ ಪಾರಿತೋಷಕ, ಪ್ರಶಸ್ತಿ ಪತ್ರದೊಂದಿಗೆ ಒಟ್ಟು ರೂ.1,50,400 ಮೊತ್ತದ ನಗದು ಹಣದೊಂದಿಗೆ ಪ್ರೋತ್ಸಾಹಿಸಲಾಯಿತು. ಅತಿಥಿಗಳಾಗಿದ್ದ ಕೂಡಿಗೆ ಕ್ರೀಡಾ ಶಾಲೆ ಪ್ರಾಂಶುಪಾಲೆ ಕೊಂಬಾರನ ಕುಂತಿ ಬೋಪಯ್ಯ, ಮೋಟಾರು ವಾಹನ ಇಲಾಖೆ ನಿವೃತ್ತ ತೆರಿಗೆ ಅಧಿಕಾರಿ ಯಾಲದಾಳು ಆನಂದ, ವಿದ್ಯಾಸಂಘದ ಮಾಜಿ ನಿರ್ದೇಶಕಿ ಯಾಲದಾಳು ಸಾವಿತ್ರಿ ಬಾಲಕೃಷ್ಣ, ಕೊಡಗು ಗೌಡ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಚೀಯಂಡಿ ರಾಧಾ ಯಾದವ್, ಪೊಯ್ಯಕಂಡಿ ಯತೀಶ್ ರಾಮಯ್ಯ ಸೇರಿದಂತೆ ವಿದ್ಯಾಸಂಘದ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯ ನಡೆಸಿಕೊಟ್ಟರು. ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರುಗಳು, ವಿದ್ಯಾರ್ಥಿ ಪೋಷಕರು ಹಾಜರಿದ್ದರು.