ಮಡಿಕೇರಿ, ಡಿ. 13: ಮಡಿಕೇರಿಯ ಜಮಾಅತ್ಗಳ ಒಕ್ಕೂಟದ ವತಿಯಿಂದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಯಿತು.ಮಡಿಕೇರಿಯ ಮುಸ್ಲಿಂ ಜಮಾಅತ್ಗಳ ಆಶ್ರಯದಲ್ಲಿ ನಗರದ ಮುಸ್ಲಿಂ ಸಮುದಾಯದ ಮಂದಿ ಇಲ್ಲಿನ ಜಿಲ್ಲಾಡಳಿತ ಕಚೇರಿ ಆವರ ಣದಲ್ಲಿ ಇಂದು ಜಮಾಯಿಸಿದ್ದರು.ಕೇಂದ್ರ ಸರಕಾರವು ಇತ್ತೀಚೆಗೆ ದೇಶದಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ಮೂಲಕ ನೂತನ ಮಸೂದೆಯನ್ನು ಜಾರಿಗೊಳಿಸಿದೆ. ಈ ತಿದ್ದುಪಡಿಯಲ್ಲಿ ಮುಸ್ಲಿಂ ಸಮುದಾಯವನ್ನು ಹಾಗೂ ಇಸ್ಲಾಂ ಧರ್ಮವನ್ನು ನಿರ್ಲಕ್ಷಿಸ ಲಾಗಿದೆ. ಮುಸ್ಲಿಂ ಸಮುದಾಯವನ್ನು ಕೈಬಿಟ್ಟು ಇತರ ಸಮುದಾಯಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಿದೆ. ಇದರಿಂದಾಗಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಪ್ರಮುಖರು ಈ ಸಂದರ್ಭ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪೌರತ್ವ ಕಾಯ್ದೆಯನ್ನು ಸಂಬಂಧಿಸಿದ ಅಧಿಕಾರಿಗಳು ಪ್ರಾಯೋಗಿಕವಾಗಿ ಜಾರಿಗೊಳಿ ಸುವಾಗ ಸಹಕಾರ ನೀಡದಂತೆ ನಿರ್ಧರಿಸಲಾಯಿತು. ಸದ್ಯದಲ್ಲಿಯೇ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಸಭೆ ನಡೆಸಿ ಬೃಹತ್ ಪ್ರತಿಭಟನೆ ನಡೆಸುವಂತೆಯೂ ನಿರ್ಧರಿಸ ಲಾಯಿತು.ಮೊದಲ ಪುಟದಿಂದ) ಆಡಿಟರ್ ಜಿ.ಹೆಚ್. ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ವ್ಯಾಪಾರೋದ್ಯಮ ನೆಲಕಚ್ಚಿದೆ. ಪ್ರಾಕೃತಿಕ ದುರಂತಗಳಿಂದ ಜನ ಸೋತಿದ್ದಾರೆ. ಈ ನಡುವೆ ಜಿಎಸ್ಟಿ ಮೊದಲಾದ ತೆರಿಗೆಗಳ ವಿಚಾರದಲ್ಲಿ ಹಿರಿಯ ಅಧಿಕಾರಿಗಳು ಜಿಲ್ಲೆಯ ಅಧಿಕಾರಿಗಳಿಗೆ ‘ಕಲೆಕ್ಷನ್ ಟಾರ್ಗೆಟ್’ ನೀಡುತ್ತಿದ್ದಾರೆ. ಹೇಗಾದರೂ ವಸೂಲಿ ಮಾಡಬೇಕೆಂದು ಮೊದಲೇ ನೆಲಕಚ್ಚಿರುವ ವ್ಯಾಪಾರೋದ್ಯಮಿಗಳಿಗೆ ಕಿರುಕುಳ, ವಸೂಲಾತಿಯ ತೊಂದರೆಗಳಿಂದ ಆಘಾತವಾಗುತ್ತಿದೆ ಎಂದರು. ಆರ್ಥಿಕವಾಗಿ ತಲೆದೋರಿರುವ ಈ ಸಂಕಷ್ಟಗಳನ್ನು ಸರಿಪಡಿಸುವ ಬದಲು ಸರಕಾರ ಇದೀಗ ಮತೀಯ ತಾರತಮ್ಯದಿಂದ ಮತ್ತೊಂದು ಕಾಯ್ದೆ ಹೇರುತ್ತಿದೆ. ಪೌರತ್ವ ಕಾಯ್ದೆ ಮೂಲಕ ಅನೇಕ ಭಾರತೀಯರೇ ಸಮರ್ಪಕ ದಾಖಲಾತಿಗಳ ಕೊರತೆಯಿದ್ದು ಅದನ್ನು ಸರಿಪಡಿಸಲಾಗದೆ ಬವಣೆ ಪಡುತ್ತಿದ್ದಾರೆ. ಇನ್ನು ಹಣ ಇರುವವರು ಬೇಕಾದ ದಾಖಲಾತಿಗಳನ್ನು ಮಾಡಿಸಿಕೊಂಡಿದ್ದಾರೆ. ಅನೇಕ ಅಮಾಯಕ ಭಾರತೀಯರೇ ಇದರಿಂದ ಅನಾಥ ಸ್ಥಿತಿಯಲ್ಲಿದ್ದು ಸೂಕ್ತ ದಾಖಲಾತಿಗಳು ಸಿಗದೆ ಆಘಾತಕ್ಕೊಳಗಾಗಲಿದ್ದಾರೆ, ಕೊಡಗಿನಲ್ಲಿಯೂ ಪ್ರವಾಹ ಸಂದರ್ಭ ದಾಖಲಾತಿಗಳನ್ನು ಕಳೆದುಕೊಂಡವರು ಇನ್ನೂ ಹೊಸ ದಾಖಲೆಗಳಿಲ್ಲದೆ, ಕಂಪ್ಯೂಟರ್ಗಳ ಸಮರ್ಪಕ ಕಾರ್ಯ ನಿರ್ವಹಣೆಯಿಲ್ಲದೆ, ನುರಿತ ತಜ್ಞರ ಕೊರತೆಯಿಂದಲೂ ‘ಅಪ್ ಡೇಟ್’ ಆಗದೆ ಆಧಾರ್ ಕಾರ್ಡ್ಗಳೂ ಕೂಡ ಲಭ್ಯವಾಗದೆ ತಮ್ಮ ಪೌರತ್ವಕ್ಕೇ ಧಕ್ಕೆಯಾಗುವ ಸ್ಥಿತಿಯಲ್ಲಿದ್ದಾರೆ. ಇಂತಹವರಿಗೆ ಮತ್ತೆ ಸರಕಾರ ಆಘಾತವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಗರಸಭಾ ಮಾಜಿ ಸದಸ್ಯ ಮನ್ಸೂರಲಿ ಮಾತನಾಡಿ ಮುಸ್ಲಿಂ ಸಮುದಾಯವನ್ನು ಒತ್ತಟ್ಟಿಗಿಟ್ಟ್ಟು ಜಾರಿಗೊಳಿಸಿರುವ ಈ ಮಸೂದೆಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸಿ ಪ್ರತಿಭಟಿಸಬೇಕು ಎಂದು ಕರೆಯಿತ್ತರು.
ನಗರಸಭಾ ಮಾಜಿ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ ಈ ಮಸೂದೆ ಜಾರಿಯಿಂದ ಇಸ್ಲಾಂ ಧರ್ಮದ ಅಸ್ತಿತ್ವಕ್ಕೇ ಕೊಡಲಿ ಪೆಟ್ಟಾಗಿದೆ. ಇದನ್ನು ಮರಳಿ ಪಡೆಯಬೇಕಾದರೆ ತೀವ್ರ ಹೋರಾಟ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ನಗರಸಭಾ ಮಾಜಿ ಸದಸ್ಯ ಅಮೀನ್ ಮೊಹಿಸಿನ್,ಬದ್ರಿಯಾ ಮಸೀದಿಯ ಮೌಲಾನಾ ಉಮ್ಮರ್ ಸಕಾಫಿ,ಮಕ್ಕಾ ಮಸೀದಿಯ ಮೌಲಾನಾ ಅಬ್ದುಲ್ ಹಕೀಂ, ಜಾಮಿಯಾ ಮಸೀದಿಯ ಮೌಲಾನಾ ತಫ್ಸೀರ್ ರಜಾಕ್ ಮೊದಲಾದವರು ಅಭಿಪ್ರಾಯ ವ್ಯಕ್ತಗೊಳಿಸಿದರು.
ಬಳಿಕ ಲಿಖಿತ ಮನವಿಯೊಂದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹ ಅವರಿಗೆ ನೀಡಲಾಯಿತು. ಮನವಿಯ ಪ್ರಮುಖಾಂಶ ಈ ಕೆಳಗಿನಂತಿದೆ.
‘ಈ ಮಸೂದೆಯು ನಮ್ಮ ದೇಶದ ನೈತಿಕ, ಸಾಂವಿಧಾನಿಕ ಸ್ಫೂರ್ತಿ ಮತ್ತು ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ. ಪೌರತ್ವ ಪ್ರÀದಾನದಲ್ಲಿ ಧಾರ್ಮಿಕ ನೆಲೆಯ ತಾರತಮ್ಯ ನಮ್ಮ ಸಂವಿಧಾನದ ಪರಿಚ್ಛೇದ 14 ಮತ್ತು ಅಂತರ್ರಾಷ್ಡ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಉಲ್ಲಂಘನೆಯಾಗಿದೆ. ಕೋಮು ಧ್ರುವೀಕರಣ ಮತ್ತು ಮುಸ್ಲಿಮರನ್ನು ಬಲಿಪಶುಗಳಾಗಿಸುವ ರಾಜಕೀಯವೇ ಇದರ ಹಿಂದಿರುವ ನೈಜ ಉದ್ದೇಶವೋ ಎಂಬ ಸಂಶಯ ಮೂಡುತ್ತದೆ. ವಿವಿಧ ಸ್ತರಗಳ ವಿಧಾನಗಳು ಮತ್ತು ಇತರ ಹಲವು ದೇಶಗಳ ನಿರಾಶ್ರಿತರ ಕುರಿತು ಮೌನವೂ ಇದರ ಒಂದು ನ್ಯೂನತೆಯಾಗಿದೆ. ಇದು ದೇಶದ ಗಂಭೀರ ಆರ್ಥಿಕ ಪರಿಸ್ಥಿತಿ ಮತ್ತು ಸಾಮಾನ್ಯ ಪ್ರಜೆಗಳು ಅನುಭವಿಸುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವೆಂಬದೂ ಗೋಚರವಾಗುತ್ತದೆ. ನಾವು ಈ ಮಸೂದೆಯನ್ನು ಬಲವಾಗಿ ವಿರೋಧಿಸುವ ಮೂಲಕ ಕೋಮು ಸೌಹಾರ್ದದ ವಾತಾವರಣ, ವಿಶ್ವಾಸ, ನ್ಯಾಯ ಮತ್ತು ಕಾನೂನಿನ ಆಡಳಿತವನ್ನು ಪ್ರೋತ್ಸಾಹಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಹಕರಿಸಬೇಕೆಂದು ವಿನಂತಿಸುತ್ತೇವೆ’ ಎನ್ನುವ ಮನವಿಯನ್ನು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಯವರಿಗೆ ತಲುಪಿಸುವಂತೆ ಕೋರಲಾಗಿದೆ.