ಮಡಿಕೇರಿ, ಡಿ.13: ರಾಷ್ಟ್ರದಲ್ಲಿ ಶೇ.35 ರಷ್ಟು ಯುವಜನರಿದ್ದು, ಯುವ ಜನರಿಂದ ದೇಶದ ಅಭಿವೃದ್ಧಿ ಸಾಧ್ಯ. ಜೊತೆಗೆ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಯುವಜನರಿಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಯಂ.ಸಿ.ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಸದೀಯ ವ್ಯವಹಾರಗಳ, ಪದವಿ ಪೂರ್ವ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ವಿದ್ಯಾಭ್ಯಾಸದ ಕಡೆ ಗಮನ ಹಾಗೂ ಭವಿಷ್ಯದ ಬಗ್ಗೆ ಚಿಂತನೆ ಇರಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಅವರದೇ ಆದ ಸ್ವಂತ ಆಲೋಚನಾ ಶಕ್ತಿ ಇದೆ. ಇಂತಹ ಕಾರ್ಯಕ್ರಮದಲ್ಲಿ ತಮ್ಮಲ್ಲಿರುವ ಬುದ್ಧಿವಂತಿಕೆ ತೋರ್ಪಡಿಸಲು ಇದು ಉತ್ತಮ ವೇದಿಕೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ, ಬದಲಾವಣೆಯ ಬಗ್ಗೆ ಚರ್ಚಿಸಬೇಕು ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೂಲ ಸೌಲಭ್ಯಗಳ ಕೊರತೆಯನ್ನು ಪ್ರಶ್ನಿಸುವಂತಾಗಬೇಕು. ಇದರಿಂದ ಪ್ರಶ್ನೆ ಕೇಳುವುದರ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸುವಂತಾಗ ಬೇಕೆಂದು ಹೇಳಿದರು.
ಭಾರತದ ಸಂವಿಧಾನ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯಲ್ಲಿದೆ. ಭವಿಷ್ಯದ ಪ್ರಜೆಗಳು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು. ಮಕ್ಕಳಿಗೆ ರಾಜಕೀಯ ಪ್ರಜ್ಞೆ, ಜೊತೆಗೆ ಸಂವಿಧಾನದ ಆಶಯಗಳನ್ನು ತಿಳಿಸುವುದರ ಮೂಲಕ ಯುವ ಜನತೆ
(ಮೊದಲ ಪುಟದಿಂದ) ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಎಂ.ಸಿ.ನಾಣಯ್ಯ ಸಲಹೆ ಮಾಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭವಾನಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಚಿಂತನೆ ಮಾಡಲು ಮತ್ತು ಜ್ಞಾನ ಸಂಪಾದನೆಗೆ ಏಕಾಂಗಿ ಹೋರಾಟ ಮಾಡಬೇಕಿದೆ. ಇದರಿಂದ ಒಂದು ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ. ವಿದ್ಯಾರ್ಥಿಗಳು ಬುದ್ಧಿವಂತಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶವನ್ನು ನೀಡಿ ಪ್ರಜಾಪ್ರಭುತ್ವದ ಕುರಿತು ಇರುವ ಆಶಯಗಳನ್ನು ತಿಳಿಸಬೇಕು. ಯುವ ಜನರು ದೇಶದ ರಕ್ಷಣೆಯ ಜೊತೆಗೆ, ಬಲಿಷ್ಠ ರಾಷ್ಟ್ರ ಕಟ್ಟಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಪ್ರಾಸ್ತವಿಕವಾಗಿ ಮಾತನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಚಿದಾನಂದ ಅವರು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿರುವ ಯುವ ಸಂಸತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಮಡಿಕೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಬಿ.ಎಲ್. ಅಭಿಷೇಕ್ (ಪ್ರಥಮ), ಹರಿಪ್ರಸಾದ್ (ದ್ವಿತೀಯ) ಹಾಗೂ ಮಾದಾಪುರ ಚೆನ್ನಮ್ಮ ಕಾಲೇಜಿನ ವಿದ್ಯಾರ್ಥಿ ಸಿ.ಬಿ.ನಿಸರ್ಗ (ತೃತೀಯ) ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಬೀನಾ (ಪ್ರಥಮ), ಭರತ್ ಕುಮಾರ್ (ದ್ವಿತೀಯ), ತಾಹೀರ (ತೃತೀಯ) ಸ್ಥಾನ ಪಡೆದಿದ್ದಾರೆ. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಕೆಂಚಪ್ಪ, ಪ್ರೊ.ದಯಾನಂದ, ಕಾರ್ಯಕ್ರಮದಲ್ಲಿ ವರಿಷ್ಮ ತಂಡ ಪ್ರಾರ್ಥಿಸಿದರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಸ್ವಾಗತಿಸಿದರು, ನಂದೀಶ್ ನಿರೂಪಿಸಿ, ವಂದಿಸಿದರು.