ಮಡಿಕೇರಿ, ಡಿ. 13: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಬಡ ವಿದ್ಯಾರ್ಥಿಗಳ ಯಶಸ್ಸಿಗಾಗಿ ಗದಾಧರ ಅಭ್ಯುದಯ ಪ್ರಕಲ್ಪ ನಡೆಯುತ್ತಿದೆ. ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಕಾಲೇಜು ಮಕ್ಕಳಿಗೆ ಇಲ್ಲಿ ಶೈಕ್ಷಣಿಕ ಏಳಿಗೆಗೆ ಈ ಪ್ರಕಲ್ಪ ಪ್ರೋತ್ಸಾಹಿಸುತ್ತಿದೆ.

ಪೊನ್ನಂಪೇಟೆ ಸುತ್ತಮುತ್ತಲಿನ ಸರಕಾರಿ ಶಾಲೆ ಹಾಗೂ ಇತರ ವಿದ್ಯಾಲಯದ ಬಡ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಆಶ್ರಮಕ್ಕೆ ಬಂದು ವಿವಿಧ ಸೇವಾ ಚಟುವಟಿಕೆ ಕೈಗೊಳ್ಳುತ್ತಾರೆ. ಇಂತಹ ಮಕ್ಕಳಿಗೆ ಮಠದಿಂದ ಶಿಕ್ಷಕರ ಮೂಲಕ ಪಠ್ಯ ಕ್ರಮಗಳನ್ನು ಹೇಳಿಕೊಡಲಾಗುತ್ತಿದೆ.

ಇದರೊಂದಿಗೆ ಮಕ್ಕಳಿಗೆ ವಸ್ತ್ರ, ಪೌಷ್ಟಿಕ ಆಹಾರ, ಲೇಖನ ಸಾಮಗ್ರಿ, ಶಾಲಾ ಬ್ಯಾಗ್‍ಗಳು ಇತ್ಯಾದಿ ಅವಶ್ಯಕ ನೆರವನ್ನು ಮಠದಿಂದ ಒದಗಿಸಿ ಕೊಡಲಾಗುತ್ತಿದೆ. ಮಾತ್ರವಲ್ಲದೆ; ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡು; ಮಾಸಿಕ ಹೆಚ್ಚಿನ ಹಾಜರಾಗಿ ಪಡೆಯುವ ವಿದ್ಯಾರ್ಥಿ ಗಳನ್ನು ಬಹುಮಾನ ನೀಡಿ ಮಠದಿಂದ ಮತ್ತಷ್ಟು ಪ್ರೋತ್ಸಾಹಿಸಲಾಗುತ್ತಿದೆ.

ಇಂತಹ ಅನೇಕ ಸೇವಾ ಚಟುವಟಿಕೆಗಳಲ್ಲಿ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿರುವ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಹಾಗೂ ಅವರ ಬಳಗ ಪ್ರಚಾರರಹಿತ ಸೇವಾ ಮನೋಭಾವದಿಂದ ನಡೆಸಿಕೊಂಡು ಬರುತ್ತಿರುವದು ಶ್ಲಾಘನೀಯ.

-ಶ್ರೀಸುತ