ಬೃಹತ್ ಸ್ಪರ್ಧೆಯಲ್ಲಿ ಗಮನ ಸೆಳೆಯಲಿರುವ ದಫ್ ಪ್ರದರ್ಶನ
ಚೆಟ್ಟಳ್ಳಿ, ಡಿ. 13: ಜಿಲ್ಲೆಯ ಯುವ ಪ್ರತಿಭೆಗಳನ್ನು ಸಮಾಜದಲ್ಲಿ ಗುರುತಿಸಲು ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಬೃಹತ್ ದಫ್ ಸ್ಪರ್ಧಾ ಕಾರ್ಯಕ್ರಮವನ್ನು ಚೊಕ್ಕಂಡಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದು, ಬೃಹತ್ ವೇದಿಕೆ, ವಾಹನ ನಿಲುಗಡೆ ಸೌಕರ್ಯ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಗ್ರಾಮದಲ್ಲಿ ಮಾಡಲಾಗಿದೆ.
ವೀರಾಜಪೇಟೆ ತಾಲೂಕಿನ ಚೊಕ್ಕಂಡಹಳ್ಳಿ-ನಲ್ವತೊಕ್ಲು ಗ್ರಾಮದ ಮಸೀದಿಯ ಸಮೀಪ ಇರುವ ಮೈದಾನದಲ್ಲಿ ತಾ. 14 ಮತ್ತು 15 ರಂದು ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರಗೆ ಜಿಲ್ಲಾಮಟ್ಟದ ಬೃಹತ್ ದಫ್ ಸ್ಪರ್ಧೆ ನಡೆಯಲಿದೆ
ಜಿಲ್ಲೆಯ ಎಲ್ಲಾ ಜಮಾಅತ್‍ನಿಂದ ತಲಾ ಒಂದರಂತೆ 100ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ರೂ. 20 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 15 ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. 10 ಸಾವಿರ ನಗದು ಹಾಗೂ ಟ್ರೋಫಿ, ಚತುರ್ಥ ಬಹುಮಾನ ರೂ. 5 ಸಾವಿರ ನಗದು ಹಾಗೂ ಟ್ರೋಫಿ ಮತ್ತು ಉತ್ತಮ ಪ್ರದರ್ಶನ ನೀಡುವ ತಂಡಗಳಿಗೆ ವಿಶೇಷ ಟ್ರೋಫಿ ಬಹುಮಾನ ನೀಡಲಾಗುವದು.
ದಫ್ ಸ್ಪರ್ಧೆಯ ನಿಯಮ
ಪ್ರತಿ ತಂಡಕ್ಕೆ ನಿರಂತರ ಸಮಯ ಪಾಲನೆ 10 ನಿಮಿಷಗಳಾಗಿರುತ್ತದೆ. ಸ್ಪರ್ಧೆಯಲ್ಲಿ ಸಮವಸ್ತ್ರ ಧರಿಸುವದು ಕಡ್ಡಾಯ. ದಫ್ ಹಾಡುಗಾರಿಕೆಯಲ್ಲಿ ಯಾವುದೇ ಭಾಷೆಯನ್ನು ಇಸ್ಲಾಂನ ನಿಯಮದಡಿಯಲ್ಲಿ ಬಳಸಬಹುದಾಗಿದೆ. ಸ್ಪರ್ಧೆಯಲ್ಲಿ ಯಾವುದೇ ಸಂಘಟನೆಗಳಿಗೆ ಸೀಮಿತವಾಗಿರುವ ಹಾಡುಗಳನ್ನು ಹಾಡುವಂತಿಲ್ಲ. ಉತ್ತಮ ಹಾಡುಗಾರಿಕೆಗೆ ಆಯ್ಕೆಯಾಗುವ ಹಾಡುಗಾರರಿಗೆ ಪ್ರಶಸ್ತಿ ನೀಡಲಾಗುವುದು. ಪ್ರತಿಯೊಂದು ಜಮಾಅತ್‍ನಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ಎಲ್ಲಾ ತಂಡದ ಸದಸ್ಯರು ಹಾಗೂ ಮೆನೇಜರ್‍ಗಳು ತಾ. 14 ರಂದು ಕಡ್ಡಾಯವಾಗಿ ಹಾಜರಿರಬೇಕು.
ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಸಮಾಜ ಸೇವಕರು, ಅಧಿಕಾರಿಗಳು, ರಾಜಕಾರಣಿಗಳು, ದಾನಿಗಳು ಹಾಗೂ ಧಾರ್ಮಿಕ ಮುಖಂಡರು ಹಾಗೂ ಪಂಡಿತರು ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ದಫ್ ಸಮಿತಿ ಅಧ್ಯಕ್ಷ ಚೊಕ್ಕಂಡಹಳ್ಳಿ ಮಜೀದ್ ತಿಳಿಸಿದ್ದಾರೆ.